ಕೋವಿಡ್ ಔಷಧಿ ಕೊರತೆಯಿಲ್ಲ: ಸುಧಾಕರ್

ಬೆಂಗಳೂರು, ಏ. ೨೧-೦ ಕೊರೊನಾ ಸೋಂಕಿನ ಚೈನ್‌ಲಿಂಕ್‌ನ್ನು ಕಡಿತಗೊಳಿಸಲು ೧೪ ದಿನಗಳ ಕಾಲ ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿಸೂರ್ಯ ಅವರ ಕಛೇರಿಗೆ ಭೇಟಿ ನೀಡಿ ಅಲ್ಲಿ ಕೊರೊನಾ ಸೋಂಕಿತರಿಗೆ ನೆರವು ಒದಗಿಸಲು ಕಲ್ಪಿಸಿರುವ ವ್ಯವಸ್ಥೆಯನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಕೊರೊನಾ ಸೋಂಕಿನ ಚೈನ್‌ನನ್ನು ಮುರಿಯಲು ೧೫ ದಿನ ಬೇಕಾಗುತ್ತದೆ ಎಂದು ತಜ್ಞರು ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಅಧ್ಯಯನ ನಡೆಸಿ ಸಲಹೆ ನೀಡಿದಂತೆ ಸರ್ಕಾರ ಈ ಚೈನ್‌ಲಿಂಕ್‌ನ್ನು ಮುರಿಯಲು ಮಾರ್ಗಸೂಚಿಗಳನ್ನು ಜಾರಿ ಮಾಡಿದೆ. ಇವುಗಳನ್ನು ಜನ ಗಂಭೀರವಾಗಿ ಪರಿಗಣಿಸಿ ಪಾಲನೆ ಮಾಡಬೇಕು ಎಂದರು .
ಹೊಸ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದರಿಂದ ೩-೪ ದಿನಗಳಲ್ಲೇ ಸೋಂಕಿನ ಪ್ರಮಾಣ ಕಡಿಮೆಯಾಗಲಿದೆ. ಜನರು ಭಯಪಡುವ ಅಗತ್ಯವಿಲ್ಲ ಎಂದರು.
ಕೊರೊನಾ ಸೋಂಕಿಗೆ ಒಳಗಾದವರೆಲ್ಲಾ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಮನೆಯಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯಬಹುದು ಎಂದರು.
ಕಠಿಣ ನಿಯಮಗಳು ಜಾರಿಯಾಗುವ ೧೪ ದಿನಗಳ ಅವಧಿಯಲ್ಲಿ ರಾಜ್ಯದ ವೈದ್ಯಕೀಯ ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸಲಾಗುವುದು. ಐಸಿಯು ಬೆಡ್, ಆಕ್ಸಿಜನ್ ಸೌಲಭ್ಯ, ರೆಮ್‌ಡಿಸಿವರ್ ಚುಚ್ಚುಮದ್ದು ಎಲ್ಲಗಳ ಲಭ್ಯತೆಯನ್ನು ಹೆಚ್ಚಿಸುತ್ತೇವೆ ಎಂದು ಅವರು ಹೇಳಿದರು.
ಕೊರೊನಾ ಹೆಚ್ಚು ಬಾಧಿಸುತ್ತಿರುವ ಬೆಂಗಳೂರು ನಗರದಲ್ಲಿ ೮ ವಲಯಗಳಿಗೆ ಉಸ್ತುವಾರಿ ಸಚಿವರುಗಳನ್ನು ನೇಮಕ ಮಾಡಲಾಗಿದೆ. ಈ ಸಚಿವರುಗಳು ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಒದಗಿಸುವ ವ್ಯವಸ್ಥೆ ಸೇರಿದಂತೆ ಕೊರೊನಾ ನಿಯಂತ್ರಣಕ್ಕೆ ಎಲ್ಲ ವ್ಯವಸ್ಥೆಗಳನ್ನು ನಿಭಾಯಿಸುತ್ತಿದ್ದಾರೆ ಎಂದರು.
ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕಾಗಿ ೮ ವಲಯಗಳಲ್ಲೂ ಸ್ಮಶಾನಗಳನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದರು.
ಕೋವಿಡ್ ರೋಗಿಗಳಿಗೆ ಅಗತ್ಯವಿರುವ ರೆಮ್‌ಡಿಸಿವರ್ ಇಂಜೆಕ್ಷನ್ ಕೊರತೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸದ್ಯ ರಾಜ್ಯಕ್ಕೆ ೨೩ ಸಾವಿರ ರೆಮ್‌ಡಿಸಿವರ್ ಚುಚ್ಚುಮದ್ದುಗಳು ಬಂದಿವೆ. ಸರ್ಕಾರಿ ಆಸ್ಪತ್ರೆಗೆ ೧೦ ಸಾವಿರ ಮತ್ತು ಖಾಸಗಿ ಆಸ್ಪತ್ರೆಗಳಿಗೆ ೧೩ ಸಾವಿರ ರೆಮ್‌ಡಿಸಿವರ್‌ನ್ನು ಪೂರೈಸಲಾಗಿದೆ. ಔಷಧಿಯ ಕೊರತೆ ಇಲ್ಲ ಎಂದು ಅವರು ಹೇಳಿದರು.
ಸೋಂಕು ಹೆಚ್ಚಿರುವ ಜಿಲ್ಲೆಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದೇನೆ. ಅದರಂತೆ ನಾಳೆ ಮೈಸೂರಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸುವುದಾಗಿ ಅವರು ಹೇಳಿದರು.
ಸೋಂಕು ಹೆಚ್ಚಿರುವ ಜಿಲ್ಲಾಧಿಕಾರಿಗಳ ಜತೆ ಸಂಪರ್ಕದಲ್ಲಿದ್ದೇವೆ. ಇಂದು ಸಂಜೆ ಕಂದಾಯ ಸಚಿವರು ಮತ್ತು ಗೃಹ ಸಚಿವರ ಜತೆ ಸೇರಿ ಸೋಂಕು ಹೆಚ್ಚಿರುವ ಜಿಲ್ಲೆಗಳ ಡಿಸಿಗಳ ಜತೆ ಚರ್ಚೆ ನಡೆಸುವುದಾಗಿಯೂ ಅವರು ಹೇಳಿದರು.
ಸೋಂಕು ತಡೆಯಲು ಸರ್ಕಾರ ಎಲ್ಲ ಪ್ರಯತ್ನ ನಡೆಸಿದೆ ಎಂದು ಅವರು ಹೇಳಿದರು.