ಕೋವಿಡ್ ಐಸಿಯು ಸಿಬ್ಬಂದಿಗಿಲ್ಲ ವೇತನ: ಹೊರಗುತ್ತಿಗೆ ನೌಕರರ ಪರದಾಟ..!

ಕಲಬುರಗಿ,ಡಿ.06: ಹೊರಗುತ್ತಿಗೆ ಸಿಬ್ಬಂದಿಗೆ ವೇತನ ನೀಡದೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸತಾಯಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅಪಾಯ ಲೆಕ್ಕಿಸದೇ ಕೋವಿಡ್ ಐಸಿಯುನಲ್ಲಿ ಕರ್ತವ್ಯ ನಿರ್ವಹಿಸಿರುವ 35 ಜನ ಸಿಬ್ಬಂದಿ ವೇತನಕ್ಕಾಗಿ ನಿತ್ಯ ಪರದಾಡುತ್ತಿದ್ದಾರೆ.
ಕೈಯಲ್ಲಿ ತಾತ್ಕಾಲಿಕ ನೇಮಕಾತಿ ಪತ್ರ ಹಿಡಿದುಕೊಂಡು ತಮ್ಮ ಅಳಲು ತೋಡಿಕೊಳ್ಳುವ ಸಿಬ್ಬಂದಿಗಳು ಕೋವಿಡ್ ವಿರುದ್ಧ ಹೋರಾಡಿ ಸೋಂಕಿತರ ಪ್ರಾಣ ಉಳಿಸಿದವರು. ಆದಾಗ್ಯೂ, ಕಳೆದ ಆರು ತಿಂಗಳಿಂದ ವೇತನ ಸಿಗದೇ ನಿತ್ಯ ಪರದಾಡುತ್ತಿದ್ದಾರೆ.
ಕೋವಿಡ್ ಎರಡನೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಾಲ್ವರು ವೈದ್ಯರು, 17 ಜನ ಸ್ಟಾಫ್ ನರ್ಸ್ ಹಾಗೂ 14 ಜನ ಡಿ ಗ್ರೂಪ್ ನೌಕರರನ್ನು ಆರು ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಂಡಿತ್ತು. ಕೆಲಸಕ್ಕೆ ಸೇರಿ ಆರು ತಿಂಗಳು ಅವಧಿ ಮುಗಿದು ನವೆಂಬರ್ 22ರಂದು ಕೆಲಸದಿಂದ ಬಿಡುಗಡೆ ಆಗಿದ್ದಾರೆ. ಆದಾಗ್ಯೂ, ಆರೋಗ್ಯ ಇಲಾಖೆ ಮಾತ್ರ ಆರು ತಿಂಗಳಿಂದ ನಯಾ ಪೈಸೆ ವೇತನ ಕೊಟ್ಟಿಲ್ಲ. ಹೀಗಾಗಿ 35 ಜನರು ವೇತನಕ್ಕಾಗಿ ಪ್ರತಿನಿತ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಅಲೆಯುತ್ತಿದ್ದಾರೆ. ಆರೋಗ್ಯ ಇಲಾಖೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕಲಬುರ್ಗಿಯೂ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ 35 ಜನರು ಕರ್ತವ್ಯ ನಿರ್ವಹಿಸಿದ್ದಾರೆ. ಇಂದು, ನಾಳೆ ವೇತನ ಆಗಬಹುದು ಎನ್ನುವ ಭರವಸೆಯಿಂದ ಸ್ವಂತ ಹಣ ಖರ್ಚು ಮಾಡಿಕೊಂಡು ಕರ್ತವ್ಯ ನಿರ್ವಹಿಸಿದ್ದೇವೆ. ದಯವಿಟ್ಟು ವೇತನ ಕೊಡಿ ಎಂದು ಪರಿಪರಿಯಾಗಿ ಮನವಿ ಮಾಡಿದ್ದಾರೆ.
ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ್ ಅವರನ್ನು ಕೇಳಿದರೆ ಬಜೆಟ್ ಸಮಸ್ಯೆ ಇದೆ. ಹಂಚಿಕೆ ಕುರಿತು ಆಗಿರುವ ಸಮಸ್ಯೆ ಶೀಘ್ರ ಇತ್ಯರ್ಥವಾಗಲಿದೆ. ಹಾಗಾಗಿ ಶೀಘ್ರ ವೇತನ ಪಾವತಿಯಾಗುತ್ತದೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಕೋವಿಡ್ ವಿರುದ್ಧ ಹೋರಾಟ ಮಾಡಿರುವ ಅವರು, ವೇತನಕ್ಕಾಗಿ ಪರದಾಡುತ್ತಿರುವುದು ವಿಪರ್ಯಾಸ.