ಕೋವಿಡ್ ಏರಿಕೆ:ಪರೀಕ್ಷೆ ಚುರುಕು

ಬೆಂಗಳೂರು, ಡಿ.೨೨- ಕೋವಿಡ್ ಉಲ್ಬಣ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಪರೀಕ್ಷೆ ಚುರುಕುಗೊಳಿಸಲಾಗಿದ್ದು, ಶೀತ, ಕೆಮ್ಮು ನಿಂದ ಬಳಲುತ್ತಿರುವ ಹಲವರು ಸ್ವಯಂಪ್ರೇರಿತರಾಗಿ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆಗೆ ಒಳಗಾಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.ರಾಜ್ಯದಲ್ಲಿ ಪರೀಕ್ಷೆಗೋಳಪಡಿಸಿದ ಜನರಲ್ಲಿ ಶೇಕಡಾ೧.೦೬ ರಷ್ಟು ಕೋವಿಡ್ ಪಾಸಿಟಿವ್ ಎಂದು ವರದಿ ಬಂದ ಹಿನ್ನೆಲೆಯಲ್ಲಿ ಪ್ರತಿ ದಿನ ರಾಜ್ಯದಲ್ಲಿ ೫ ಸಾವಿರ ಟೆಸ್ಟ್ ನಡೆಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಅದರಂತೆ ಬೆಂಗಳೂರಿನಲ್ಲಿ ಕನಿಷ್ಠಪಕ್ಷ ೧೫೦೦ ಟೆಸ್ಟ್ ಗಳನ್ನು ನಡೆಸುವ ಗುರಿ ಹೊಂದಿದೆ.ಹೀಗಾಗಿ ನಗರದ ಹಲವು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಟೆಸ್ಟಿಂಗ್ ಸ್ಪಾಟ್ ಮಾಡಲಾಗಿದ್ದು, ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಟೆಸ್ಟಿಂಗ್ ಕಡ್ಡಾಯಗೊಳಿಸಲಾಗಿದೆ.ಈವರೆಗೆ ೧೭೯೧ ಆರ್.ಟಿ.ಪಿ. ಸಿ.ಆರ್ ಹಾಗೂ ೪೭೨ ಆರ್.ಎ.ಟಿ ಟೆಸ್ಟ್‌ಗಳನ್ನು ಮಾಡಲಾಗಿದೆ. ೯೩ ಪಾಸಿಟಿವ್ ಕೇಸ್‌ಗಳು ವರದಿಯಾಗಿದೆ. ಪೂರ್ವ ವಲಯದಲ್ಲಿ ಅತಿ ಹೆಚ್ಚು ಕೇಸ್ ಗಳು ಪತ್ತೆಯಾಗಿವೆ.ನಗರದ ೧೪೪ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಚುರುಕುಗೊಂಡಿದೆ. ಪ್ರಮುಖ ಪ್ರದೇಶಗಳಾದ ಶಾಂತಿನಗರ, ವಿಲ್ಸನ್ ಗಾರ್ಡನ್, ಶೇಷಾದ್ರಿಪುರ, ಮಲ್ಲೇಶ್ವರದ ಕೇಂದ್ರಗಳಲ್ಲಿ ಕೊರೋನಾ ಟೆಸ್ಟ್ ನಡೆಸಲಾಗುತ್ತಿದ್ದು, ಸಿಬ್ಬಂದಿಗಳು ಮಾಸ್ಕ್, ಪಿಪಿಇ ಕಿಟ್ ಗ್ಲೌಸ್ ಗಳನ್ನು ಧರಿಸಿ ಪರೀಕ್ಷೆ ನಡೆಸುತ್ತಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್,ಪ್ರಕರಣಗಳನ್ನು ಎದುರಿಸಲು ಆರೋಗ್ಯ ವಿಭಾಗದಲ್ಲಿ ಯಾವುದೇ ಕೊರತೆ ಇಲ್ಲ. ಅಗತ್ಯ ಸಿಬ್ಬಂದಿ ಮತ್ತು ಪರಿಕರಗಳನ್ನು ವಿವಿಧ ವಿಭಾಗಗಳ ಮೂಲಕ ಕ್ರೋಡಿಕರಿಸಿಕೊಂಡು ರೋಗಿಗಳ ಆರೈಕೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.ಸದ್ಯ ಬೆಂಗಳೂರಿನಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿಲ್ಲ. ಕೇರಳದಲ್ಲಿ ಹೊಸ ರೂಪಾಂತರಿ ತಳಿಯಿಂದ ಉದ್ಭವಿಸಿರುವ ಆತಂಕ ನಮ್ಮಲ್ಲಿ ಇಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಕೋವಿಡ್ ಮಾರ್ಗಸೂಚಿಯನ್ನು ಪಾಲಿಕೆಯ ಎಲ್ಲ ಆಸ್ಪತ್ರೆಗಳಿಗೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಪಾಲಿಸುತ್ತಿವೆ ಎಂದು ಮಾಹಿತಿ ನೀಡಿದರು.ವರ್ಷಾಂತ್ಯದಲ್ಲಿ ಕೋವಿಡ್ ಸೋಂಕು ಉಲ್ಬಣವಾದಲ್ಲಿ ಪರಿಣಾಮಕಾರಿಯಾಗಿ ನಿಯಂತ್ರಿಸಲು ಎಲ್ಲ ವಿಭಾಗಗಳ ಹಿರಿಯ ಅಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತದೆ. ಯಾರೂ ಕೂಡ ತುರ್ತು ರಜೆಯನ್ನು ಬಿಟ್ಟರೆ ಯಾವುದೇ ಬೇರೆ ರಜೆಗಳನ್ನು ತೆಗೆದುಕೊಳ್ಳದಂತೆ ನಿರ್ದೇಶಿಸಿದ್ದೇನೆ ಎಂದು ಹೇಳಿದರು.

ಮೇಕ್ ಶಿಫ್ಟ್ ಆಸ್ಪತ್ರೆ ಸಜ್ಜು..!

ನಗರದ ರಾಜೀವ್‌ಗಾಂಧಿ ಎದೆರೋಗಗಳ ಸಂಸ್ಥೆಯಲ್ಲಿ (ಆರ್‌ಜಿಐಸಿಡಿ) ರೂಪಾಂತರಿತಳಿಗೆ ಒಳಗಾದ ರೋಗಿಗಳಿಗೆ ಚಿಕಿತ್ಸೆ ಒದಗಿಸಲು ೨೦೦ ಹಾಸಿಗೆ ಸಾಮರ್ಥ್ಯದ ತಾತ್ಕಾಲಿಕ ಆಸ್ಪತ್ರೆಯನ್ನು ಸಜ್ಜುಗೊಳಿಸಲಾಗಿದೆ. ಇಲ್ಲಿ ವೈದ್ಯರು, ಅರೆವೈದ್ಯರು ಹಾಗೂ ಇತರ ಸಿಬ್ಬಂದಿಗಳನ್ನು ನಿಯೋಜಿಸಲು ಹಾಗೂ ಔಷಧ ನೀಡಲು ವಿಶೇಷ ಕ್ರಮ ಕೈಗೊಳ್ಳಲಾಗಿದೆ.