ಕೋವಿಡ್ ಎರಡನೇ ಅಲೆ ದೂರದೃಷ್ಟಿ ಕೊರತೆಯಿಂದ ರೋಗ ಉಲ್ಬಣ;ಸಿದ್ದು

ಬಾದಾಮಿ,ಮೇ29: ಸರಕಾರ ಕೋವಿಡ್ ರೋಗ ಹರಡದಂತೆ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಟಾಸ್ಕ್ ಸಮಿತಿ ಮೂರು ತಿಂಗಳು ಮೊದಲೆ ವರದಿಯನ್ನು ನೀಡಿದ್ದರೂ ಸರಕಾರ ಉದಾಸೀನ ಮಾಡಿತು. ಕೋವಿಡ್ ಎರಡನೇ ಅಲೆಯ ದೂರದೃಷ್ಟಿಯ ಕೊರತೆಯಿಂದ ಅನೇಕ ಸಮಸ್ಯೆ ಎದುರಿಸಬೇಕಾಯಿತು. ಕೋವಿಡ್ ನಿರ್ವಹಣೆಯಲ್ಲಿ ಯಡಿಯೂರಪ್ಪ ಅವರ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಿಎಂ, ಶಾಸಕ ಸಿದ್ಧರಾಮಯ್ಯ ಹೇಳಿದರು.
ಅವರು ಶುಕ್ರವಾರ ನಗರದ ತಾಪಂ ಸಭಾ ಭವನದಲ್ಲಿ ಕೋವಿಡ್ ನಿಯಂತ್ರಣ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಆಕ್ಷಿಜನ್, ವೆಂಟಿಲೇಟರ್, ರೆಮಿಡಿಸಿವರ್ ಔಷಧ ಕೊರತೆ ವ್ಯಾಕ್ಷಿನ್ ಕೊರತೆ ಇದ್ದು ರೋಗ ತಡೆಗಟ್ಟಲು ಎರಡು ಮೂರು ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದರು.
ಹೆಚ್ಚು ಆರ್‍ಟಿಪಿಸಿಆರ್ ಪರೀಕ್ಷೆ ಮಾಡಬೇಕು. ನಿಗದಿತ ಪ್ರಮಾಣದಲ್ಲಿ ಪರೀಕ್ಷೆ ಆಗುತ್ತಿಲ್ಲ. ಇದರ ಪರಿಣಾಮ ರೋಗ ವೇಗವಾಗಿ ಹರಡಿದೆ. ಆಕ್ಸಿಜನ್ ಕೊರತೆಯಿಂದ ಜನರು ಸಾವನ್ನಪ್ಪುತ್ತಿದ್ದಾರೆ.ದಿನಕ್ಕೆ 1750 ಮೆ.ಟ, ಆಕ್ಷಿಜನ್ ಬೇಡಿಕೆಯಿದ್ದು, ಈಗ 1050, 1200 ಮೆ.ಟ.ಸರಬರಾಜು ಆಗುತ್ತಿದೆ. ಈಗ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಸಾವಿನ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಟೆಸ್ಟ ಕಡಿಮೆ, ಔಷಧ ಕೊರತೆ, ಲಸಿಕೆ ಹಾಕುವುದರಿಂದ 80- 90 ನಿಯಂತ್ರಣ ಮಾಡಬೇಕಾದರೆ ಲಸಿಕೆಯಿಂದ ಮಾತ್ರ ಸಾಧ್ಯ. ಲಸಿಕೆ ಎಲ್ಲರಿಗೂ ಹಾಕಬೇಕು.
ಬಾಗಲಕೋಟೆ ಜಿಲ್ಲೆ ಡಿಸಿ ಸಂಪರ್ಕದಲ್ಲಿದ್ದೇನೆ. ಆಕ್ಷಿಜನ್ ಕೊರತೆ ಇದೆ ಎಂದು ತಿಳಿಸಿದಾಗ ನಾನು ಆಕ್ಷಿಜನ್ ಕೊಡಿಸಲು ಪ್ರಯತ್ನ ಮಾಡಿದ್ದೇನೆ. ಆಕ್ಷಿಜನ್ ಕೊರತೆಯಿಂದ ಯಾರೂ ಸತ್ತಿಲ್ಲ. ಎರಡು ಬಾರಿ ಜಿಲ್ಲಾ, ತಾಲೂಕ ಅಧಿಕಾರಿಗಳೊಂದಿಗೆ ಝೂಮ್ ಸಭೆ ಮಾಡಿದ್ದೇನೆ. ಸಾವು ಮತ್ತು ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಲಾಕ್ ಡೌನ್ ಆದ ನಂತರ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ ಎಂದರು.
ಜೀವ ಮತ್ತು ಜೀವನ ಉಳಿಸುವುದು ಮುಖ್ಯ. ಆರೋಗ್ಯ ಇಲಾಖೆ ಸಿಬ್ಬಂದಿ, ಪೆÇಲೀಸ್, ಪೌರಕಾರ್ಮಿಕರು, ಗ್ರಾ.ಪಂ.ಸಿಬ್ಬಂದಿ ಸೇರಿದಂತೆ ಕೊರೊನ ವಾರಿಯರ್ಸ್ ಕೊರೊನ ರೋಗದ ಸಲುವಾಗಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ ಅವರಿಗೆ ಅಭಿನಂದಿಸಬೇಕು ಎಂದರು.
ತಾಲೂಕಿನ ಕುಳಗೇರಿ ಪಿಎಚ್‍ಸಿಗೆ ಅಂಬುಲೆನ್ಸ್ ನೀಡಲಾಗುವುದು. ಕೆರೂರ ನಗರದಲ್ಲಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಬೇಕು. ಒಬ್ಬ ವೈದ್ಯರನ್ನು ನೇಮಿಸಲು ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಾ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಬಿ.ಎಚ್.ರೇವಣಸಿದ್ದಪ್ಪ, ಗ್ರಾಮೀಣ ಕುಡಿಯುವ ನೀರು ವಿಭಾಗದ ಎಇಇ ಉಪ್ಪಲದಿನ್ನಿ ಅಧಿಕಾರಿಗಳನ್ನು ಸಿದ್ದರಾಮಯ್ಯ ಬಿಸಿ ಮುಟ್ಟಿಸುವ ಜತೆಗೆ ಮುಂಬರುವ ದಿನಗಳಲ್ಲಿ ಅಧಿಕಾರಿಗಳು ದೂರು ಬಾರದಂತೆ ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅನಂತ ದೇಸಾಯಿ ಶಾಸಕರು ಕೇಳಿದ ಮಾಹಿತಿಗೆ ಉತ್ತರಿಸಿದ ಅವರು ಬಾದಾಮಿ ಹಾಗೂ ಗುಳೇದಗುಡ್ಡ ಸೇರಿದಂತೆ 29367 ಜನರ ಸ್ಯಾಂಪಲ್‍ಗಳನ್ನು ಸಂಗ್ರಹಿಸಲಾಗಿದ್ದು, 2295 ಪಾಸಿಟಿವ್ ವರದಿಯಾಗಿವೆ. 359 ಸಕ್ರಿಯ ಪ್ರಕರಣಗಳಿದ್ದು, 26317 ನೆಗಟೀವ್ ಪ್ರಕರಣಗಳು, 396 ಜನರ ವರದಿಗಳನ್ನು ನಿರೀಕ್ಷಿಸಲಾಗಿದೆ. ಒಟ್ಟು 5 ಜನರು ಕೋವಿಡ್ ಕಾರಣದಿಂದ ಮರಣ ಹೊಂದಿದ್ದಾರೆ. ಒಟ್ಟು 1936 ಜನರು ಕೋವಿಡ್ ರೋಗದಿಂದ ಗುಣಮುಖರಾಗಿದ್ದಾರೆ. ಹೋಮ ಐಸೋಲೇಶನ್‍ನಲ್ಲಿ 1606 ಜನರು ಚಿಕಿತ್ಸೆ ಪಡೆಯುತ್ತಿದ್ದು, 127 ಸಕ್ರಿಯವಾಗಿವೆ. 1479 ಗುಣಮುಖರಾಗಿದ್ದಾರೆ. ಸರಕಾರಿ ಎರಡು ಖಾಸಗಿ ಆಸ್ಪತ್ರೆ ಸೇರಿ ಒಟ್ಟು 75 ಬೆಡ್‍ಗಳಿವೆ. ಅದರಲ್ಲಿ 43 ಜನತೆ ಚಿಕಿತ್ಸೆ ಪಡೆಯುತ್ತಿದ್ದಾರೆ. 32 ಬೆಡ್ ಖಾಲಿ ಇವೆ. ಸಧ್ಯ ಜಿಲ್ಲಾಧ್ಯಂತ ಮತ್ತು ಬಾದಾಮಿ ತಾಲೂಕಿನಲ್ಲಿ ಆಕ್ಷಿಜೆನ್ ಕೊರತೆ ಇಲ್ಲವೆಂದು ಸ್ಪಷ್ಟಪಡಿಸಿದರು.
ತಾಲೂಕಿನಲ್ಲಿ ಕೋವಿಶೀಲ್ಡ್ ವ್ಯಾಕ್ಸಿನ್ ಈಗಾಗಲೆ 37315 ಹಾಕಲಾಗಿದೆ. ಕೋವ್ಯಾಕ್ಸಿನ್ 11925 ಲಸಿಕೆ ಹಾಕಲಾಗಿದೆ. ಕೋವಿಶೀಲ್ಡ್ 2210, ಕೋವ್ಯಾಕ್ಸೀನ್ 1150 ಸೇರಿದಂತೆ 3360 ಲಸಿಕೆ ಸಂಗ್ರಹವಿದೆ ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷ ಮಂಜುನಾಥ ಹೊಸಮನಿ, ಕೆರೂರ ಪಪಂ ಅಧ್ಯಕ್ಷೆ ಮಂಜುಳಾ ತಿಮ್ಮಾಪೂರ, ಎಸಿ ಎಂ.ಗಂಗಪ್ಪ ತಹಸೀಲ್ದಾರ್ ಸುಹಾಸ ಇಂಗಳೆ, ಇಒ ಅರ್ಜುನ್ ಒಡೆಯರ್, ಟಿಎಚ್‍ಒ ಡಾ. ಎಂ.ಬಿ.ಪಾಟೀಲ, ಕೆ.ಡಿ.ನಾಯಕ, ಶಿವಾನಂದ ಜಾಡರ, ಅಣ್ಣಪೂರ್ಣ ಕುಬಕಡ್ಡಿ, ಜ್ಯೋತಿ ಗಿರೀಶ, ಎಂ.ಪಿ.ಮಾಗಿ ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳು ಇದ್ದರು.