ಕೋವಿಡ್ ಎರಡನೇ ಅಲೆ ಗಂಭೀರವಾಗಿ ಪರಿಗಣಿಸಲು ಎಚ್ಚರಿಕೆ

ದಾವಣಗೆರೆ, ಏ.2: ದೊಡ್ಡ ದೊಡ್ಡ ಅಂಗಡಿಗಳು, ವ್ಯಾಪಾರ ವಹಿವಾಟು ಕೇಂದ್ರಗಳು, ಮದುವೆ ಮಂಟಪಗಳು, ಎಪಿಎಂಸಿ ಮಾರುಕಟ್ಟೆ, ಥಿಯೇಟರ್, ವಸತಿ ಶಾಲೆಗಳು ಸೇರಿದಂತೆ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಕೆ ನೀಡಿದರು.  ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ವ್ಯಾಪಾರ ವಹಿವಾಟು, ಕಲ್ಯಾಣ ಮಂಟಪ, ಶೈಕ್ಷಣಿಕ ಸಂಸ್ಥೆ ಒಟ್ಟಾರೆ ಆರ್ಥಿಕ ಚಟುವಟಿಕೆ ನಡೆಸುವ ಮಾಲೀಕರುಗಳಿಗೆ ಕೋವಿಡ್ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಅನುಸರಣೆ ಕುರಿತು ತಿಳಿಸಲು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಈ ರೀತಿ ಜನ ಸೇರುವ ಅಂಗಡಿಗಳು, ಕೇಂದ್ರಗಳನ್ನೇ ‘ಸೂಪರ್ ಸ್ಪೆçಡರ್’ ಎಂದು ಕರೆಯಲಾಗುತ್ತಿದ್ದು, ಇಲ್ಲಿ ನಿಯಂತ್ರಣ ಅಗತ್ಯವಾಗಿದೆ. ಆದ ಕಾರಣ ಈ ವಹಿವಾಟು, ಕೇಂದ್ರಗಳ ಮಾಲೀಕರು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕೆಂದರು. ಕಳೆದ ಸಾಲಿನ ಮಾರ್ಚ್ ಮಾಹೆಯಲ್ಲಿ ಕೇವಲ 02 ಪ್ರಕರಣಗಳಿದ್ದು ಮಾರ್ಚ್ 23 ಕ್ಕೆ ಲಾಕ್‌ಡೌನ್ ತಯಾರಿಯಾಗಿತ್ತು. ಜೊತೆಗೆ ಜನರು ಅತ್ಯಂತ ಎಚ್ಚರಿಕೆಯಿಂದ ಇದ್ದರು. ಆದರೆ ಪ್ರಸ್ತುತ 156 ಪ್ರಕರಣಗಳಿದ್ದರೂ ಜನರು ನಿರ್ಲಕ್ಷö್ಯ ವಹಿಸುತ್ತಿದ್ದಾರೆ. ಉಡಾಫೆಯಿಂದ ಎಲ್ಲಿ ಬೇಕೆಂದರಲ್ಲಿ ಓಡಾಡುತ್ತಿದ್ದು, ಮಾಸ್ಕ್ ಧರಿಸುತ್ತಿಲ್ಲ, ಅಂತರ ಕಾಪಾಡುತ್ತಿಲ್ಲ.  ಪರಿಸ್ಥಿತಿ ಇಂದು ಅತ್ಯಂತ ಗಂಭೀರವಾಗಿದೆ. ಕೋವಿಡ್ ವೈರಾಣು ರೂಪಾಂತರಗೊAಡಿದ್ದು ಎರಡನೇ ಅಲೆಯಲ್ಲಿ ವೈರಾಣು ಅತ್ಯಂತ ವೇಗವಾಗಿ ಹರಡುತ್ತಿದೆಯಾದ್ದರಿಂದ ಯಾರೂ ಕೋವಿಡ್‌ನ್ನು ಹಗುರವಾಗಿ ತೆಗೆದುಕೊಳ್ಳಬಾರದು. ವ್ಯಾಪಾರ, ವಹಿವಾಟು, ಮದುವೆ ಮನೆ, ಶೈಕ್ಷಣಿಕ ಸಂಸ್ಥೆಗಳಲ್ಲಿ ಮಾಸ್ಕ್ ಇಲ್ಲದೇ ಓಡಾಡುತ್ತಿದ್ದಾರೆ. ಜನ ಸಾಯ್ತಾ ಇದ್ದರೂ ಜನರು ಮೈಮರೆತಿರುವುದು ಸಲ್ಲದು.  ಈ ಹಿನ್ನಲೆಯಲ್ಲಿ ವ್ಯಾಪಾರ ವಹಿವಾಟು ಮಾಡುವ ಎಲ್ಲ ಆರ್ಥಿಕ ಚಟುವಟಿಕೆಯ ಕೇಂದ್ರಗಳು ಮತ್ತು ಶೈಕ್ಷಣಿಕ ಸಂಸ್ಥೆಯವರು ಸರ್ಕಾರದ ಕೋವಿಡ್ ಸಮುಚಿತ ವರ್ತನೆಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಜಿಲ್ಲಾಡಳಿತಕ್ಕೆ ಸಹಕರಿಸಬೇಕು. ಮಾರ್ಗಸೂಚಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದಂತೂ ಖಚಿತವಾಗಿದ್ದು, ಉಲ್ಲಂಘನೆ ಮಾಡಿದವರ ವಿರುದ್ದ ಕಾಯ್ದೆ, ನಿಯಮಗಳನ್ವಯ ಅತ್ಯಂತ ಕಠಿಣ ಕ್ರಮ ಜರುಗಿಸಲಾಗುವುದು ಎಂದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾತನಾಡಿ, ಕಳೆದ ಸಾಲಿನ ಮಾರ್ಚ್ 4 ರಿಂದ ಕೋವಿಡ್ ನಿಯಂತ್ರಣ ಚಟುವಟಿಕೆಯನ್ನು ಸರ್ಕಾರ ಅತ್ಯಂತ ಕಟ್ಟುನಿಟ್ಟಾಗಿ ಆರಂಭಿಸಿದ್ದು, ಇಲ್ಲಿಯವರೆಗೆ ಮುಂದುವರೆದಿದೆ. ಇದುವರೆಗೆ 27605 ಪಾಸಿಟಿವ್ ಪ್ರಕರಣ ಬಂದಿದ್ದು, ಒಟ್ಟು 264 ಸಾವು ಸಂಭವಿಸಿದೆ. ಕಳೆದ ಆಗಸ್ಟ್ನಲ್ಲಿ ಅತಿ ಹೆಚ್ಚು ಪಾಸಿಟಿವಿಟಿ ದರ ಅಂದರೆ ಶೇ16.30 ಇತ್ತು. ಸೋಂಕು ಹರಡುವ ಕೊಂಡಿ ತುಂಡು ಮಾಡುವ ಕಾರ್ಯವನ್ನು ಮಾಡುತ್ತಾ ಬಂದಿದ್ದು, ಈ ಮಾರ್ಚ್ನಲ್ಲಿ ಪಾಸಿಟಿವಿಟಿ ದರ 0.29 ಇದೆ. ಪ್ರಸ್ತುತ 160 ಪಾಸಿಟಿವ್ ಪ್ರಕರಣ ಇದ್ದು ಇದರಲ್ಲಿ ದಾವಣಗೆರೆ ತಾಲ್ಲೂಕಿನದ್ದೇ 124 ಪ್ರಕರಣ ಇದೆ ಹಾಗೂ ನಗರದ್ದೇ 106 ಪ್ರಕರಣ ಇದ್ದು ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ಎಲ್ಲ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳು ಐಎಲ್‌ಐ ಮತ್ತು ಎಸ್‌ಎಆರ್‌ಐ ಪ್ರಕರಣಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸಬೇಕು. ಹಾಗೂ ಎಲ್ಲ ಹೋಟೆಲ್, ಛತ್ರ, ವಸತಿ ಶಾಲೆ ಸೇರಿದಂತೆ ಹೆಚ್ಚು ಜನರು ಕೆಲಸ ಮಾಡುವ ಅಂಗಡಿಗಳು, ಹೋಟೆಲ್, ಶಾಲೆಗಳಲ್ಲಿ 15 ದಿನಗಳಿಗೊಮ್ಮೆ ಕೋವಿಡ್ ಪರೀಕ್ಷೆ ಮಾಡಿಸಬೇಕೆಂದರು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ಕೋವಿಡ್ ನಿಯಂತ್ರಣ ಹಿನ್ನೆಲೆಯ ಸರ್ಕಾರದ ಮಾರ್ಗಸೂಚಿಗಳನ್ನು ನಿರ್ಲಕ್ಷಿಸುತ್ತಿರುವುದು ಸರಿಯಲ್ಲ. ಸ್ವಯಂ ನಿಯಂತ್ರಣ ಇಂದು ಅತಿ ಮುಖ್ಯವಾಗಿದೆ. ವೈಯಕ್ತಿಕವಾಗಿ ಕೋವಿಡ್ ವಿರುದ್ದ ಹೋರಾಡಬೇಕಿರುವ ಇಂದಿನ ಸ್ಥಿತಿಯಲ್ಲಿ ವ್ಯಾಪಾರು ವಹಿವಾಟು ಇತರೆ ಸಂಸ್ಥೆಗಳು ಸಹಕರಿಸಬೇಕು.  ಎಂದರು.ಸಭೆಯಲ್ಲಿ ಜಿ.ಪಂ ಸಿಇಓ ಡಾ.ವಿಜಯ ಮಹಾಂತೇಶ ದಾನಮ್ಮನವರ್   ಎಡಿಸಿ ಪೂಜಾರ ವೀರಮಲ್ಲಪ್ಪ, ಎಸಿ ಮಮತಾ ಹೊಸಗೌಡರ್ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಡಿಹೆಚ್‌ಓ ಡಾ.ನಾಗರಾಜ್, ಜಿಲ್ಲಾ ವರ್ತಕರ ಸಂಘದ, ಐಎಂಎ, ಛೇಂಬರ್ ಆಫ್ ಕಾಮರ್ಸ್, ಸಿನೆಮಾ ಥಿಯೇಟರ್, ವಸತಿ ಶಾಲೆಗಳ, ಬಟ್ಟೆ ಅಂಗಡಿಗಳ ಸಂಘ, ಎಪಿಎಂಸಿ ವರ್ತಕರ ಸಂಘದ, ಲಿಕ್ಕರ್ ಮತ್ತು ವೈನ್‌ಸಂಘದ, ಬೀದಿ ಬದಿ ವ್ಯಾಪಾರಿಗಳ ಸಂಘ ಸೇರಿದಂತೆ ವಿವಿಧ ರೀತಿಯ ಆರ್ಥಿಕ ಚಟುವಟಿಕೆ ಮಾಡುವಂತಹ ಸಂಸ್ಥೆಗಳ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು.