ಕೋವಿಡ್ ಉಲ್ಭಣ: ಸರ್ಕಾರದ ಮಾರ್ಗಸೂಚಿ ಪಾಲನೆಗೆ ಮನವಿ

ತುರುವೇಕೆರೆ, ಏ. ೨೭- ಕೊರೊನಾ ೨ನೇ ಅಲೆ ಆರ್ಭಟ ಹೆಚ್ಚಾಗಿರುವುದರಿಂದ ಇದರ ನಿಯಂತ್ರಣಕ್ಕೆ ಸರ್ಕಾರದ ಮಾರ್ಗಸೂಚಿಗಳನ್ನು ತಾಲ್ಲೂಕಿನಲ್ಲಿ ಕಟ್ಟುನಿಟ್ಟಾಗಿ ಪಾಲಿಸುವಂತೆ ತಾಲ್ಲೂಕು ಆಡಳಿತ ಸಾರ್ವಜನಿಕರಿಗೆ ಮನವಿ ಮಾಡಿದೆ.
ಕೊರೊನಾ ಸೋಂಕಿತ ಪ್ರಕರಣಗಳು ದಿನೇ ದಿನೇ ಏರುಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಮಳಿಗೆಗಳು, ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಲಾಗಿದೆ. ಇದರೊಂದಿಗೆ ಅನಗತ್ಯವಾಗಿ ಪಟ್ಟಣದಲ್ಲಿ ಮಾಸ್ಕ್ ಧರಿಸದೆ ಓಡಾಡುವವರಿಗೆ ಕೊರೊನಾ ಎಚ್ಚರಿಕೆಯ ಜತೆಗೆ ದಂಡ ವಿಧಿಸುವುದಾಗಿ ತಾಲ್ಲೂಕು ಆಡಳಿತ ನಡೆಸಿದ ಜಾಗೃತಿ ಜಾಥಾದಲ್ಲಿ ತಿಳಿಸಲಾಯಿತು.
ಪಟ್ಟಣದಲ್ಲಿ ಪಿಎಸ್‌ಐ ಪ್ರೀತಂ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದ್ದು, ಈ ತಂಡ ಕೋವಿಡ್ ನಿಯಂತ್ರಣಕ್ಕೆ ವರ್ತಕರು, ನಾಗರೀಕರು ಸಹಕಾರ ನೀಡಬೇಕು ಎಂದು ಮನವಿ ಮಾಡುವ ಮೂಲಕ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆಯೂ ಜಾಗೃತಿ ಮೂಡಿಸುತ್ತಿದೆ.
ತಹಶೀಲ್ದಾರ್ ನಯೀಂ ಉನ್ನೀಸಾ ಮಾತನಾಡಿ, ಕೋವಿಡ್ ೨ನೇ ಅಲೆ ತೀವ್ರ ವೇಗವಾಗಿ ಹರಡುತ್ತಿದೆ. ತಮ್ಮ ಅಮೂಲ್ಯ ಜೀವ ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿ ನಿಮ್ಮದೇ ಆಗಿರುವುದರಿಂದ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಲೇಬೇಕು. ನಿಮ್ಮ ಆರೋಗ್ಯದ ಜತೆಗೆ ಮತ್ತೊಬ್ಬರ ಆರೋಗ್ಯವನ್ನೂ ಕಾಪಾಡುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಅನಗತ್ಯವಾಗಿ ಓಡಾಡುವುದಕ್ಕೆ ಕಡಿವಾಣ ಹಾಕಿ, ಅಗತ್ಯ ವಸ್ತುಗಳನ್ನು ಖರೀದಿಸಲು ಹೊರ ಬಂದಾಗಲೂ ಸಹ ಸಾಧ್ಯವಾದಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ಮಾಡಿದರು.
ಪಿಎಸ್‌ಐ ಪ್ರೀತಂ ಮಾತನಾಡಿ, ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದವರ ವಿರುದ್ಧ ಕಡ್ಡಾಯವಾಗಿ ಕ್ರಮ ಕೈಗೊಳ್ಳಲಾಗುವುದು. ಮಾಸ್ಕ್ ಧರಿಸದೆ ಓಡಾಡುವವರಿಗೆ ದಂಡ ವಿಧಿಸಲಾಗುವುದು. ಹೋಟೆಲ್, ಬೇಕರಿಗಳಲ್ಲಿ ಜನರಿಗೆ ಪಾರ್ಸಲ್ ಮೂಲಕ ಆಹಾರ ಪದಾರ್ಥ ನೀಡಬೇಕು. ಸ್ಥಳದಲ್ಲೇ ಆಹಾರ ಸ್ವೀಕರಿಸಲು ಅವಕಾಶ ನೀಡಿದರೆ ಮಾಲೀಕರಿಗೆ ದಂಡ ವಿಧಿಸಲಾಗುವುದು. ಯಾವುದೇ ಅಂಗಡಿಗಳ ಮುಂದೆ ಜನಜಂಗುಳಿ ಏರ್ಪಡದಂತೆ ಅಂಗಡಿಗಳವರು ನಿಗಾ ವಹಿಸಬೇಕು. ಪ್ರತಿಯೊಬ್ಬ ಗ್ರಾಹಕರ ನಡುವೆ ಕನಿಷ್ಠ ೨ ರಿಂದ ೪ ಅಡಿ ಅಂತರವಿರುವಂತೆ ನೋಡಿಕೊಳ್ಳಬೇಕು. ಮಾಸ್ಕ್ ಧರಿಸದವರನ್ನು ಅಂಗಡಿ, ಹೋಟೆಲ್‌ಗೆ ಸೇರಿಸಬಾರದು ಎಂದರು.
ಪ.ಪಂ. ಮುಖ್ಯಾಧಿಕಾರಿ ಮಂಜುಳಾದೇವಿ ಮಾತನಾಡಿ, ಕಳೆದ ಮೂರು ದಿನಗಳಿಂದ ತಹಶೀಲ್ದಾರ್ ನಯೀಂ ಉನ್ನೀಸಾ ನೇತೃತ್ವದಲ್ಲಿ ಕಂದಾಯ ಇಲಾಖೆ, ಪಟ್ಟಣ ಪಂಚಾಯ್ತಿ ಹಾಗೂ ಪೊಲೀಸ್ ಇಲಾಖೆ ಕಾರ್ಯಾಚರಣೆಯಲ್ಲಿ ಮಾಸ್ಕ್ ಧರಿಸದವರಿಗೆ ೧೦೦ ರಿಂದ ೨೦೦ ರೂ. ರವರೆಗೆ ದಂಡ ವಿಧಿಸಲಾಗುತ್ತಿದೆ. ಪ್ರತಿ ವಾರ್ಡ್‌ನಲ್ಲಿ ಕಸ ಸಂಗ್ರಹಣಾ ವಾಹನದಲ್ಲಿ ಧ್ವನಿವರ್ಧಕದ ಮೂಲಕ ನಾಗರಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಕೊರೊನಾ ಮಾರ್ಗಸೂಚಿ ಪಾಲಿಸದ ಅಂಗಡಿಗಳವರಿಗೂ ದಂಡ ವಿಧಿಸಲಾಗಿದೆ. ನಾಗರಿಕರು ತಮ್ಮ ಆರೋಗ್ಯದ ಬಗ್ಗೆ ಸ್ವಯಂ ಎಚ್ಚೆತ್ತುಕೊಳ್ಳಬೇಕು. ಆಗ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯವಾಗಲಿದೆ ಎಂದರು.
ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಪಟ್ಟಣ ಪಂಚಾಯ್ತಿ, ಆರೋಗ್ಯ ಇಲಾಖೆ, ಬೆಸ್ಕಾಂ, ತೋಟಗಾರಿಕೆ, ಕೃಷಿ ಇಲಾಖೆ ಸೇರಿದಂತೆ ತಾಲ್ಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಪಟ್ಟಣದಲ್ಲಿ ಕೊರೊನಾ ಜಾಗೃತಿ ಜಾಥಾ ನಡೆಸಿ ನಾಗರಿಕರಲ್ಲಿ ಕೊರೊನಾ ನಿಯಂತ್ರಣಕ್ಕೆ ಸಹಕರಿಸುವಂತೆ ಮನವಿ ಮಾಡಿದರು.
ಜಾಥಾದಲ್ಲಿ ಪ.ಪಂ. ಅಧ್ಯಕ್ಷ ಅಂಜನ್ ಕುಮಾರ್, ಮುಖ್ಯಾಧಿಕಾರಿ ಮಂಜುಳಾದೇವಿ, ಸಿಪಿಐ ನವೀನ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸುಪ್ರಿಯಾ, ಕೃಷಿ ಸಹಾಯಕ ನಿರ್ದೇಶಕಿ ಪೂಜಾ, ಬೆಸ್ಕಾಂನ ಎಇಇ ಚಂದ್ರನಾಯ್ಕ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಆಂಜನೇಯರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.