ಕೋವಿಡ್ ಆಸ್ಪತ್ರೆಯಿಂದ ಕೆಲಸಗಾರರ ವಜಾ; ಕರವೇ ಖಂಡನೆ-ಪ್ರತಿಭಟನೆ

ಚಿತ್ರದುರ್ಗ.ಡಿ.೫: ಕೋವಿಡ್-೧೯ ಆಸ್ಪತ್ರೆಯಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಸ್ವಚ್ಚತಾ ಸಿಬ್ಬಂದಿ ಮತ್ತು ಶುಶ್ರೂಷಕಿಯರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ಕುಮಾರ್‌ಶೆಟ್ಟಿ ಬಣದ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಹದಿನೈದು ಮಂದಿ ಸ್ವಚ್ಚತಾ ಸಿಬ್ಬಂದಿ ಹಾಗೂ ಎಂಟು ಮಂದಿ ಶುಶ್ರೂಷಕಿಯರಿಗೆ ಯಾವುದೇ ಸೂಚನೆ ನೀಡದೆ ಕೆಲಸದಿಂದ ತೆಗೆದು ಹಾಕಿರುವುದರಿಂದ ಇದನ್ನೆ ನಂಬಿಕೊಂಡಿರುವ ಅವರುಗಳು ದಿಕ್ಕುತೋಚದಂತಾಗಿ ಧೈರ್ಯ ಕಳೆದುಕೊಂಡಿದ್ದಾರೆ. ಕೊರೋನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಕೊರೋನಾ ಪೀಡಿತರ ಹತ್ತಿರ ಸುಳಿಯಲು ಮನೆಯವರೇ ಹಿಂದೇಟು ಹಾಕುತ್ತಿದ್ದ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕರಾದ ಡಾ.ಬಸವರಾಜ್, ಪ್ರಥಮ ದರ್ಜೆ ಸಹಾಯಕ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರ ಆಪ್ತ ಸಹಾಯಕ ಮಲ್ಲಿಕಾರ್ಜುನಸ್ವಾಮಿ ಮೌಖಿಕವಾಗಿ ಆದೇಶಿಸಿ ಸ್ವಚ್ಚತಾ ಸಿಬ್ಬಂದಿಗೆ ತಿಂಗಳಿಗೆ ಹದಿನೆಂಟು ಸಾವಿರ ರೂ. ಮತ್ತು ಶುಶ್ರೂಷಕಿಯರಿಗೆ ಇಪ್ಪತ್ತು ಸಾವಿರ ರೂ.ಗಳ ವೇತನ ನೀಡುವುದಾಗಿ ನಂಬಿಸಿ ಕೆಲಸಕ್ಕೆ ತೆಗೆದುಕೊಂಡು ಈಗ ಏಕಾಏಕಿ ಎಲ್ಲರನ್ನು ಕೆಲಸದಿಂದ ತೆಗೆದಿರುವುದು ಯಾವ ನ್ಯಾಯ. ಕೂಡಲೆ ಇವರುಗಳನ್ನು ಮತ್ತೆ ನೇಮಕ ಮಾಡಿಕೊಂಡು ಜೀವನಕ್ಕೆ ದಾರಿ ತೋರುವಂತೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ಕುಮಾರ್‌ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಎಸ್.ಕೆ.ಮಹಾಂತೇಶ್ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.ಕರವೇ ಪದಾಧಿಕಾರಿಗಳು ಹಾಗೂ ಕೋವಿಡ್ ಆಸ್ಪತ್ರೆಯ ಸ್ವಚ್ಚತಾ ಸಿಬ್ಬಂದಿ ಮತ್ತು ಶುಶ್ರೂಷಕಿಯರು ಈ ಸಂದರ್ಭದಲ್ಲಿ ಹಾಜರಿದ್ದರು.