ಕೋವಿಡ್ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪೂರೈಕೆ ಸಮರ್ಪಕವಿರಲಿ: ರಾಮಚಂದ್ರನ್ ಆರ್

ಬೀದರ:ಎ.20: ಕೋವಿಡ್-19 ನಿಗದಿತ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಆಕ್ಸಿಜನ್ ಪೂರೈಕೆಯಲ್ಲಿ ಯಾವುದೇ ರೀತಿಯ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಸಭಾಂಗಣದಲ್ಲಿ ವೈದ್ಯಾಧಿಕಾರಿಗಳು ಮತ್ತು ಕರ್ನಾಟಕ ಗ್ಯಾಸ್ ಏಜೆನ್ಸಿ ಮತ್ತು ಪ್ರ್ಯಾಕ್ಸ್ ಏರ್ ಏಜೆನ್ಸಿದವರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ದಿನೇದಿನೆ ಕೋವಿಡ್ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಕೋವಿಡ್ ಬಾಧಿತರಿಗೆ ಪೂರೈಸಲು ಅಗತ್ಯಕ್ಕೆ ತಕ್ಕಂತೆ ಆಕ್ಸಿಜನ್ ಲಭ್ಯತೆಯ ಬಗ್ಗೆ ಗಮನ ಹರಿಸಬೇಕು. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಾಗಿದೆ ಎಂದು ಯಾವುದೇ ಕಾರಣಕ್ಕೂ ಸಾರ್ವಜನಿಕರಿಂದ ದೂರುಗಳು ಬರದ ಹಾಗೆ ಗಮನ ಹರಿಸಬೇಕು. ಸಿಲಿಂಡರ್ ತುಂಬಿಸುವ ಕ್ಯಾಪ್ಯಾಸಿಟಿಯನ್ನು ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿಗಳು ಇದೆ ವೇಳೆಯಲ್ಲಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಬ್ರಿಮ್ಸ ಆಸ್ಪತ್ರೆಯಲ್ಲಿ 14 ಕಿಲೋ ಲೀಟರ್ ಕ್ಯಾಪಾಸಿಟಿ ಆಕ್ಸಿಜನ್ ಟ್ಯಾಂಕ್ ಇದೆ. ಒಂದು ದಿನ ಕರ್ನಾಟಕ ಗ್ಯಾಸ್ ಏಜೇನ್ಸಿಯವರು ಮತ್ತೊಂದು ದಿನ ಪ್ರ್ಯಾಕ್ಸ್ ಏರ್ ಏಜೆನ್ಸಿಯವರು ಎಂಓಯು ಪ್ರಕಾರ ಪ್ರತಿದಿನ ಆಕ್ಸಿಜನ್ ಸರಬರಾಜು ಮಾಡುತ್ತಾರೆ. ಸುಮಾರು 450 ರೋಗಿಗಳ ದಾಖಲಾತಿ ಇರುವುದರಿಂದ ಈ ಪೈಕಿ ಬಹಳಷ್ಟು ಜನರಿಗೆ ಆಕ್ಸಿಜನ್ ಬೇಕಿರುವುದರಿಂದ ಪ್ರತಿ ದಿನ 8 ಎಎಲ್ ಆಕ್ಸಿಜನ್ ಬಳಕೆಯಾಗುತ್ತಿದೆ. ಈಗ ಸದ್ಯಕ್ಕೆ ಆಸ್ಪತ್ರೆಗಳಲ್ಲಿ ಯಾವುದೇ ರೀತಿಯಲ್ಲಿ ಆಕ್ಸಿಜನ್ ಕೊರತೆ ಇರುವುದಿಲ್ಲ ಎಂದು ಇದೆ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿ.ಜಿ.ರೆಡ್ಡಿ ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಇನ್ನೀತರ ವೈದ್ಯಾಧಿಕಾರಿಗಳು ಮತ್ತು ಕರ್ನಾಟಕ ಗ್ಯಾಸ್ ಏಜೆನ್ಸಿ ಮಾಲೀಕರು ಹಾಗೂ ಇನ್ನೀತರರು ಇದ್ದರು.
ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ: ಬೆಳಗ್ಗೆ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬ್ರಿಮ್ಸ್ ಆಸ್ಪತ್ರೆಯಲ್ಲಿನ ಆಕ್ಸಿಜನ್ ಸ್ಥಿತಿಗತಿ ಪರಿಶೀಲನಾ ಸಭೆ ನಡೆಸಿದ ಬೆನ್ನಲ್ಲೇ ಜಿಲ್ಲಾಧಿಕಾರಿಗಳು, ಸಂಜೆ ವೇಳೆಗೆ ಬ್ರಿಮ್ಸ್ ಆಸ್ಪತ್ರೆ ಆವರಣಕ್ಕೆ ತೆರಳಿ, ಲಿಕ್ವೀಡ್ ಆಕ್ಸಿಜನ್ ಟ್ಯಾಂಕ್‍ನ್ನು ಖುದ್ದು ಪರಿಶೀಲಿಸಿದರು.