ಕೋವಿಡ್ ಆರೈಕೆ ಕೇಂದ್ರದಿಂದ ಬಡರೋಗಿಗಳಿಗೆ ಸಹಾಯಕ

ಬಾದಾಮಿ, ಜೂ4: ಗ್ರಾಮೀಣ ಭಾಗದ ಕೋವಿಡ್ ಸೋಂಕಿತರಿಗೆ ಮತ್ತು ಮನೆಯಲ್ಲಿ ಐಸೋಲೇಶನ್ ಸಾಧ್ಯತೆಯಿರದ ರೋಗಿಗಳಿಗೆ ಗುಣಮಟ್ಟದ ಆರೈಕೆ, ಸೇವೆ ಮತ್ತು ಮಾನಸಿಕ ನೆಮ್ಮದಿಯನ್ನು ನೀಡುವ ಸದುದ್ದೇಶದಿಂದ ಕೋವಿಡ್ ಆರೈಕೆ ಕೇಂದ್ರ ಆರಂಭ ಮಾಡಿರುವುದು ಬಡವರಿಗೆ ಸಹಾಯಕವಾಗಲಿದೆ ಎಂದು ಆರ್.ಎಸ್.ಎಸ್.ಉತ್ತರ ಪ್ರಾಂತ ಪ್ರಚಾರಕ ನರೇಂದ್ರಜಿ ಹೇಳಿದರು.
ಅವರು ಗುರುವಾರ ನಗರದ ಶ್ರೀ ವೀರಪುಲಿಕೇಶಿ ಗ್ರಾಮೀಣ ಆಯುರ್ವೇದ ಮಹಾವಿದ್ಯಾಲಯದಲ್ಲಿ ಹುಬ್ಬಳ್ಳಿಯ ಸೇವಾ ಭಾರತಿ ಟ್ರಸ್ಟ್ ಸಂಚಾಲಿತ ಗುಳೇದಗುಡ್ಡ ಮತ್ತು ಶ್ರೀ ವೀರಪುಲಿಕೇಶಿ ಗ್ರಾಮೀಣ ಆಯುರ್ವೇದ ಮಹಾವಿದ್ಯಾಲಯದ ಸಹಯೋಗದಲ್ಲಿ ಕೋವಿಡ್ ಆರೈಕೆ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ನಾವು ನಮ್ಮ ಕರ್ತವ್ಯ ಮಾಡಬೇಕು. ಮಾಡುವ ಕೆಲಸಕ್ಕೆ ಪ್ರಚಾರ ಮಾಡಬೇಡಿರಿ. ಇಂದು ಮಾನವÀ ತನ್ನ ಸ್ವಾರ್ಥಕ್ಕೆ ಜೀವಜಲ, ಪ್ರಕೃತಿಯನ್ನು ಹಾಳು ಮಾಡುತ್ತಾ, ಸಸ್ಯ ಸಂಕುಲವನ್ನು ಕಡಿದು ಹಾಕುತ್ತಿದ್ದೇವೆ ಆಮ್ಲಜನಕ ಹೇಗೆ ನಮಗೆ ಸಿಗಲು ಸಾಧ್ಯ ಎಂದರು. ಕೋವಿಡ್ ರೋಗ ಶಾಂಪಲ್ ಅಷ್ಟೆ. ಮುಂದೆ ಭಯಾನಕ ಸ್ಥಿತಿ ಎದುರಾಗುವ ಆತಂಕವಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ನಾವೆಲ್ಲರೂ ಪರೋಪಕಾರಿಯಾಗಿ ಬದುಕಬೇಕು ಎಂದು ಸಲಹೆ ನೀಡಿದರು
ಎಸ್.ವಿ.ಪಿ.ಆಯುರ್ವೇದ ಮಹಾವಿದ್ಯಾಲಯದ ಚೇರಮನ್ ಮಹಾಂತೇಶ ಮಮದಾಪೂರ ಮಾತನಾಡಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಈಗಾಗಲೇ ಕೋವಿಡ್ ಲಸಿಕೆ ಕೇಂದ್ರ ಆರಂಭ ಮಾಡಿದ್ದು, ಕೇರ್ ಸೆಂಟರ್ ಆರಂಭ ಮಾಡಿರುವುದು ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ. ಕೋವಿಡ್ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆರಂಭದಲ್ಲಿ ನಗರದಲ್ಲಿ ಕೋವಿಡ್ ರೋಗ ಹೆಚ್ಚಾಗಿ ಕಂಡು ಬರುತ್ತಿತ್ತು. ಈಗ ಗ್ರಾಮೀಣ ಭಾಗದಲ್ಲಿ ಕಂಡು ಬರುತ್ತಿದೆ. ಆರೈಕೆ ಕೇಂದ್ರದಲ್ಲಿ ರೋಗಿಗಳಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ಗುಳೇದಗುಡ್ಡದ ಶ್ರೀ ಅಭಿನವ ಒಪ್ಪತ್ತೇಶ್ವರ ಮಹಾಸ್ವಾಮಿಗಳ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವೇದಿಕೆಯ ಮೇಲೆ ಸೇವಾ ಭಾರತಿ ಅಧ್ಯಕ್ಷ ಸಂಜೀವ ಕಾರಕೂನ ಹಾಜರಿದ್ದರು. ಬಾಬು ರಾಜೇಂದ್ರ ನಾಯಕ ಪ್ರಾಸ್ಥಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾರ್ಗದರ್ಶಕ ಘನಶಾಮಜಿ ರಾಠಿ, ಮಾಜಿ ಶಾಸಕರಾದ ಎಂ.ಕೆ.ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ, ಪ್ರಾಚಾರ್ಯ ಡಾ.ಬಿ.ಎಂ.ಮುಲ್ಕಿಪಾಟೀಲ, ಗಿರೀಶ ದಾನಪ್ಪಗೌಡರ, ಮುತ್ತು ಉಳ್ಳಾಗಡ್ಡಿ, ಡಾ.ಬಸವರಾಜ ಗಂಗಲ್ಲ, ಬಸವರಾಜ ಯಂಕಂಚಿ, ಕಾರ್ಯದರ್ಶಿ ಸಂಗಮೇಶ ಹುನಗುಂದ ಸೇರಿದಂತೆ ಆಯುರ್ವೇದ ಕಾಲೇಜಿನ ಸಿಬ್ಬಂದಿ ಹಾಜರಿದ್ದರು. ಕಿರಣ ಪವಾಡಶೆಟ್ಟರ ಸ್ವಾಗತಿಸಿದರು.