ಕೋವಿಡ್ ಆರೈಕೆ ಕೇಂದ್ರಕ್ಕೆ ಸ್ಥಳಾವಕಾಶ ಕಲ್ಪಿಸಿದ ಹಿರೇಮಠ ಸಂಸ್ಥಾನ

ಭಾಲ್ಕಿ:ಎ.27: ‘ಜೀವವಿದ್ದರೆ ಜೀವನ ಎನ್ನುವ ಪ್ರಧಾನಮಂತ್ರಿಯವರ ಮಾತು ಅಕ್ಷರಶಃ ಸತ್ಯವಾಗಿದೆ’ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.

ಹಿರೇಮಠ ಸಂಸ್ಥಾನದ ಅಡಿಯಲ್ಲಿ ನಡೆಯುತ್ತಿರುವ ಸಂಗಮೇಶ್ವರ ಶಾಲಾ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಜಿ.ಎಚ್. ಶಿವಮಠ ನಿಡಗುಂದಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಸೋಮವಾರ ಕೋವಿಡ್ ಕೇಂದ್ರ ಸ್ಥಾಪನೆ ಕುರಿತು ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

‘ನಮ್ಮ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಕೈಗಾರಿಕಾ ತರಬೇತಿ ಕೇಂದ್ರವು ಕೋವಿಡ್ ರಜೆಯಿಂದ ಖಾಲಿ ಇದೆ. ಹೀಗಾಗಿ ತಾಲ್ಲೂಕು ಆಡಳಿತ ನಮ್ಮ ತರಬೇತಿ ಕೇಂದ್ರದಲ್ಲಿ ಕೋವಿಡ್ ಕೇಂದ್ರ ಸ್ಥಾಪಿಸಿ, ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ರೋಗಿಗಳಿಗೆ ಬೇಕಾಗುವ ಮೂಲ ಸೌಕರ್ಯಗಳನ್ನು ನಮ್ಮ ಸಂಸ್ಥೆಯಿಂದ ಒದಗಿಸಿಕೊಡುತ್ತೇವೆ’ ಎಂದು ಹೇಳಿದರು.ಸ್ಥಳ ಪರಿಶೀಲನೆಗೆ ಆಗಮಿಸಿದ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ಮಾತನಾಡಿ, ‘ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸ್ಥಳಾವಕಾಶ ಸಿಗುತ್ತಿಲ್ಲ. ಹಾಗಾಗಿ ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಡೆಸಲಾಗುವ ಹಾಸ್ಟೆಲ್‍ನಲ್ಲಿ 50 ಹಾಸಿಗೆಯ ಕೋವಿಡ್ ಕೇಂದ್ರ ತೆರೆಯಲಾಗಿದೆ. ಇನ್ನೆರಡು ದಿವಸಗಳಲ್ಲಿ ಹಾಸ್ಟೆಲ್‌ನಲ್ಲಿಯೂ ರೋಗಿಗಳ ಸಂಖೆ ಹೆಚ್ಚಾಗುವ ಸಂಭವವಿದ್ದು, ಹಿರೇಮಠ ಸಂಸ್ಥಾನದ ವತಿಯಿಂದ ನಡೆಸುತ್ತಿರುವ ಕೈಗಾರಿಕಾ ತರಬೇತಿ ಕೇಂದ್ರವು ಉತ್ತಮ ಕಟ್ಟಡ ಮತ್ತು ಶೌಚಾಲಯಗಳನ್ನು ಹೊಂದಿದೆ. ಪೂಜ್ಯರು ಸ್ಥಳಾವಕಾಶ ಮಾಡಿಕೊಟ್ಟರೆ ಇಲ್ಲಿಯೂ ಕೋವಿಡ್ ಕೇಂದ್ರ ತೆರೆದು ರೋಗಿಗಳಿಗೆ ರಕ್ಷಣೆ ನೀಡಲಾಗುವುದು’ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜ್ಞಾನೇಶ್ವರ ನಿರಗುಡೆ, ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಅಬ್ದುಲ್ ಖಾದರ್, ಸಮಾಜ ಕಲ್ಯಾಣ ಇಲಾಖೆಯ ಧನರಾಜ ಬಂಬುಳಗೆ, ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯ ದೇವರಾಜ ಕುಂಬಾರ, ಮುಖ್ಯಶಿಕ್ಷಕ ಜಯರಾಜ ದಾಬಶೆಟ್ಟಿ, ಪ್ರಾಚಾರ್ಯ ಅಶೋಕ ರಾಜೋಳೆ, ತಹಶೀಲ್ದಾರ್ ಕಚೇರಿಯ ಜಗದೀಶ, ರಾಜು ಜುಬರೆ, ಬಾಬು ಬೆಲ್ದಾಳ, ದೀಪಕ ಥಮಕೆ ಉಪಸ್ಥಿತರಿದ್ದರು.