ಕೋವಿಡ್ ಆತಂಕ;ಮುಂಬಯಿ ಮಾಲ್‌ಗಳ ಬಂದ್‌ಗೆ ಚಿಂತನೆ

ಮುಂಬೈ, ಏ. ೨- ಕೋವಿಡ್ ಎರಡನೇ ಅಲೆಯು ಭಾರತದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಕಳೆದ ೨೪ ಗಂಟೆಗಳಲ್ಲಿ ೮,೦೦೦ಕ್ಕೂ ಅಧಿಕ ಪ್ರಕರಣಗಳು ಮುಂಬೈ ಮಹಾನಗರ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿವೆ.
ಮುಂಬೈನಲ್ಲಿ ೮,೬೪೬ ಹೊಸ ಪ್ರಕರಣಗಳು ದಾಖಲಾಗಿದ್ದು, ೧೮ ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.
ಈವರೆಗೆ ಮುಂಬೈ ಮಹಾನಗರದಲ್ಲಿ ೪೧,೨೯,೯೩೧ ಮಂದಿಗೆ ಕೋವಿಡ್ ಸೋಂಕು ತಗುಲಿದ್ದು, ಒಟ್ಟು ೪೬,೭೫೮ ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ.
೨೪ ಗಂಟೆ ಅವಧಿಯಲ್ಲಿ ೫,೦೩೧ ಮಂದಿಯಲ್ಲಿ ಚೇತರಿಕೆ ಕಂಡುಬಂದಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈವರೆಗೆ ೩,೫೫,೬೯೧ ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಮಾರ್ಚ್ ೨೫ರಿಂದ ೩೧ರ ನಡುವಿನ ಕೋವಿಡ್ ಪ್ರಕರಣಗಳ ಒಟ್ಟಾರೆ ಬೆಳವಣಿಗೆಯ ದರವು ಶೇ. ೧.೩೮ ಆಗಿದೆ ಎಂದು ಬಿಎಂಸಿ ತಿಳಿಸಿದೆ.
ಮುಂಬೈನಲ್ಲಿ ಸೋಂಕು ಹೆಚ್ಚುತ್ತಿರುವಂತೆಯೇ ಬಿಎಂಸಿ ಎಚ್ಚೆತ್ತುಕೊಂಡಿದ್ದು, ಮಾಲ್ ಮತ್ತು ದೇವಸ್ಥಾನಗಳನ್ನು ಸದ್ಯದಲ್ಲೇ ಬಂದ್ ಮಾಡಲಾಗುವುದು ಎಂದು ಮೇಯರ್ ಕಿಶೋರಿ ಪೆಡ್ನೇಕರ್ ಸುಳಿವು ನೀಡಿದ್ದಾರೆ.