ಕೋವಿಡ್ ಅರ್ಥ ಮೋದಿಗೆ ಆಗಿಲ್ಲ


ನವದೆಹಲಿ,ಮೇ ೨೮- ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ತೀಕ್ಷ್ಣ ಟೀಕೆಗಳನ್ನು ನಡೆಸಿರುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ಇಂದೂ ಸಹ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದು, ಕೋವಿಡ್ ಏನು ಎಂಬುದು ಮೋದಿ ಅವರಿಗೆ ಅರ್ಥವೇ ಆಗಿಲ್ಲ ಎಂದು ಟೀಕಿಸಿದ್ದಾರೆ.
ದೇಶದಲ್ಲಿ ಕೊರೊನಾ ೨ನೇ ಅಲೆಗೆ ಪ್ರಧಾನಿ ನರೇಂದ್ರಮೋದಿ ಅವರೇ ಜವಾಬ್ದಾರಿ. ಅವರಿಗೆ ಕೋವಿಡ್ ಏನು ಎಂಬುದೇ ಇದುವರೆಗೂ ಅರ್ಥ ಆಗಿಲ್ಲ ಎಂದು ಅವರು ದೂರಿದ್ದಾರೆ.
ಕೊರೊನಾ ಮೊದಲನೇ ಅಲೆ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ ನಿಜ. ಆದರೆ, ೨ನೇ ಅಲೆ ದೇಶದಲ್ಲಿ ಕಾಣಿಸಿಕೊಳ್ಳಲು ಮೋದಿ ಅವರೇ ಜವಾಬ್ದಾರಿ ಎಂದು ಆನ್‌ಲೈನ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಪ್ರಧಾನಿ ಮೋದಿ ಅವರ ನಿಕ್ಷ್ಯ ಬೇಜವಾಬ್ದಾರಿಯಿಂದ ದೇಶದಲ್ಲಿ ಕೊರೊನಾ ೨ನೇ ಅಲೆ ಕಾಣಿಸಿಕೊಂಡಿತ್ತು. ವೈರಸ್‌ಗೆ ದೇಶದ ಬಾಗಿಲನ್ನು ತೆರೆದಿಟ್ಟ ಮೋದಿ, ಅದನ್ನು ಮುಚ್ಚುವ ಕೆಲಸ ಮಾಡಿಲ್ಲ ಎಂದು ದೂರಿದ ಅವರು, ಅಮೆರಿಕದಲ್ಲಿ ಈಗಾಗಲೇ ಅರ್ಧದಷ್ಟು ಜನಸಂಖ್ಯೆಗೆ ಲಸಿಕೆ ನೀಡಲಾಗಿದೆ. ಭಾರತದಲ್ಲಿ ಲಸಿಕೆ ತಯಾರು ಮಾಡಿದರೂ ಎಲ್ಲರಿಗೂ ಲಸಿಕೆ ನೀಡಲು ಸರ್ಕಾರದಿಂದ ಸಾಧ್ಯವಾಗಿಲ್ಲ ಎಂದು ಟೀಕಿಸಿದರು.