ಕೋವಿಡ್ ಅಬ್ಬರ-ಸರಳ ಕಾರ್ಮಿಕ ದಿನಾಚರಣೆ

ಕೋಲಾರ,ಮೇ.೨: ಆರೋಗ್ಯ ಇಲಾಖೆಯ ಕೊರೊನಾ ವಾರಿಯರ್ಸ್‌ಅನ್ನು ಸನ್ಮಾನಿಸಿ, ಸಸಿಗಳನ್ನು ನೀಡುವ ಮೂಲಕ ರೈತಸಂಘದಿಂದ ನಗರದಲ್ಲಿ ಕಾರ್ಮಿಕ ದಿನಾಚರಣೆಯನ್ನು ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಪ್ರತಿ ಹಂತದಲ್ಲಿಯೂ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಸಮಸ್ಯೆಗಳು ದಿನೇದಿನೇ ಹೆಚ್ಚಾಗುತ್ತಲೇ ಇದ್ದರೂ ಸರ್ಕಾರಗಳು ಮಾತ್ರ ಅತ್ತ ಗಮನ ಹರಿಸದೆ ನಿರ್ಲಕ್ಷ್ಯ ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರವೂ ಮಹತ್ವದ್ದಾಗಿದ್ದರೂ ಕನಿಷ್ಟ ವೇತನ, ಸೇವಾ ಭದ್ರತೆ, ಗುರುತಿನ ಚೀಟಿ ಸೇರಿದಂತೆ ಅನೇಕ ಸೌಲಭ್ಯಗಳು ಈವರೆಗೂ ಪ್ರತಿಯೊಬ್ಬ ಕಾರ್ಮಿಕರಿಗೂ ತಲುಪದೇ ಇರುವುದು ವಿಷಾಧಕರ ಸಂಗತಿಯಾಗಿದೆ.
ಕಾರ್ಮಿಕರ ಬೆವರಹನಿಗೆ ತಕ್ಕ ಪ್ರತಿಫಲ ದೊರೆತಾಗಲೇ ಎಲ್ಲ ಕಾರ್ಮಿಕರು ನೆಮ್ಮದಿಯಿಂದ ಬಾಳಲು ಸಾಧ್ಯವಾಗುತ್ತದೆ. ಕಾರ್ಮಿಕ ದಿನಾಚರಣೆಗೂ ಸರಿಯಾದ ಅರ್ಥ ಬಂದಂತಾಗುತ್ತದೆ. ಆ ನಿಟ್ಟಿನಲ್ಲಿ ಸರ್ಕಾರವು ಈಗಲಾದರೂ ಎಚ್ಚೆತ್ತು ಕಾರ್ಮಿಕರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ತಲುಪಿಸಲು ಮುಂದಾಗಬೇಕಿದೆ ಎಂದು ಆಗ್ರಹಿಸಿದರು.
ರೈತಸಂಘದ ಜಿಲ್ಲಾ ಕಾರ್ಯದರ್ಶಿ ವಡಗೂರು ಮಂಜುನಾಥ್ ಮಾತನಾಡಿ, ದುಡಿಯುವ ವರ್ಗದ ಮೇಲೆ ಶೋಷಣೆ ನಿರಂತರವಾಗಿದ್ದು, ಎಲ್ಲೆಡೆ ಭದ್ರತೆಯಿಲ್ಲದಂತಾಗಿದೆ. ಕಾರ್ಮಿಕ ದಿನಾಚರಣೆಯು ಕೇವಲ ಆಚರಣೆಗೆ ಸೀಮಿತಗೊಳ್ಳದೆ ಕಾರ್ಮಿಕರಿಗೆ ಕನಿಷ್ಟ ಮೂಲಭೂತ ಸೌಕರ್ಯಗಳನ್ನು
ಕಲ್ಪಿಸಲು ಸರ್ಕಾರ ಪಣತೊಡಬೇಕಿದೆ ಎಂದು ಒತ್ತಾಯಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಆರೋಗ್ಯ ಇಲಾಖೆಯ ಕೊರೊನಾ ವಾರಿಯರ್ಸ್, ಕೊರೊನಾ ಹಿನ್ನೆಲೆಯಲ್ಲಿ ಜನರು ಆರೋಗ್ಯ ಇಲಾಖೆಯ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು
ರಜೆ ಹಾಕದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವುದಾಗಿ ಹೇಳಿದ ಅವರು, ಕೊರೊನಾ ನಿಯಮಗಳನ್ನು ನಿರ್ಲಕ್ಷಿಸದೆ ಪ್ರತಿಯೊಬ್ಬರೂ ಪಾಲಿಸಬೇಕಿದೆ ಎಂದು ಮನವಿ ಮಾಡಿದರು.