ಕೋವಿಡ್‍ನಿಂದ ಮೃತಪಟ್ಟ ತಾಯಿ ಮುಖ ನೋಡಲು ಬಹುಮಹಡಿ ಕಟ್ಟಡ ಏರಿದ ಪುತ್ರ !

ಕಲಬುರಗಿ :ಏ.26: ಕೋವಿಡ್-19 ಸೋಂಕಿನಿಂದ ಮೃತಪಟ್ಟ ತನ್ನ ತಾಯಿಯ ಮುಖ ನೋಡಲಿಕ್ಕೆ ಅನುಮತಿ ನೀಡಲಿಲ್ಲ ಎಂಬ ಕಾರಣಕ್ಕಾಗಿ ಯುವಕನೊಬ್ಬ ಬಹುಮಹಡಿ ಕಟ್ಟಡ ಏರಲು ಪ್ರಯತ್ನಿಸಿದ ಘಟನೆ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ವರದಿಯಾಗಿದೆ.
ಕಳೆದ ಹನ್ನೆರಡು ದಿನಗಳಿಂದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನ ತಾಯಿ ಸದೋಮವಾರ ಬೆಳಿಗ್ಗೆ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾಳೆ. ಇದರಿಂದ ಖಿನ್ನತೆಗೆ ಒಳಗಾಗಿರುವ ಯುವಕ ಹಾಗೂ ಯುವಕನ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿತ್ತು.
ಒಮ್ಮೆ ತಾಯಿ ಮುಖ ನೋಡಲು ಬಿಡಿ ಎಂದು ಸಿಬ್ಬಂದಿಯನ್ನು ಪರಿಪರಿಯಾಗಿ ಕೇಳಿದರೂ ಸಹ ಒಪ್ಪದೇ ಇದ್ದಾಗ ಬಹುಮಹಡಿ ಜಿಮ್ಸ್ ಕಟ್ಟಡವನ್ನು ಏರಲು ಯತ್ನಿಸಿದ್ದಾರೆ. ಅರ್ಧದಷ್ಟು ಕಟ್ಟಡ ಏರಿದ್ದನ್ನು ಕಂಡು ಸಿಬ್ಬಂದಿ ಆತನ ಮನವೊಲಿಸಲು ಯತ್ನಿಸಿದ್ದಾರೆ.
ಯುವಕ ಕೇಳದೇ ಇದ್ದಾಗ ಆತನ ಜೀವಕ್ಕೆ ಕುತ್ತು ಬರಬಹುದೆಂಬ ಕಾರಣಕ್ಕೆ ತಾಯಿ ಮುಖ ತೋರಿಸುವುದಾಗಿ ಭರವಸೆ ನೀಡಿದ್ದಾರೆ. ಇದಾದ ನಂತರ ಆಸ್ಪತ್ರೆ ಕಟ್ಟಡದಿಂದ ಯುವಕ ಕೆಳಗಿಳಿದಿದ್ದಾನೆ. ಯುವಕನ ದುಸ್ಸಾಹಸದಿಂದ ಆಸ್ಪತ್ರೆ ಮುಂಭಾಗದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.