ಕೋವಿಡ್‍ನಿಂದ ನಮೋಶಿ ಗುಣಮುಖ: ಸೋಂಕಿಗೆ ಭಯಬೀಳದೇ ಎಚ್ಚರಿಕೆಯಿಂದ ಇರಲು ಸಲಹೆ

ಕಲಬುರಗಿ :ಏ.26:ಕೋವಿಡ್ ಸೋಂಕಿನಿಂದ ನಾನು ಗುಣಮುಖನಾಗಿದ್ದೇನೆ. ಯಾರೊಬ್ಬರೂ ಸಹ ಕೋವಿಡ್ ಸೋಂಕಿಗೆ ಭಯ ಹೊಂದಬಾರದು. ಬದಲಿಗೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಹಿರಿಯ ಮುಖಂಡ ಶಶೀಲ್ ಜಿ ನಮೋಶಿ ಅವರು ಹೇಳಿದರು.
ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಹರಿಬಿಟ್ಟು ಮಾತನಾಡಿದ ಅವರು, ನನಗೂ ಸಹ ಕೋವಿಡ್ ಸೋಂಕು ದೃಢಪಟ್ಟಿತ್ತು. ನಾನು ಮನೆಯಲ್ಲಿಯೇ ಉಪಚಾರ ಪಡೆದು ಈಗ ದೇವರ ದಯೆಯಿಂದ ನಾನು ಗುಣಮುಖನಾಗಿದ್ದೇನೆ. ಯಾರೂ ಸಹ ಸೋಂಕಿಗೆ ಹೆದರುವ ಅಗತ್ಯವಿಲ್ಲ ಎಂದರು.
ನನಗೆ ಕೋವಿಡ್ ಸೋಂಕು ತಗುಲಿದೆ ಎಂದು ಭಯಪಡುವುದೂ ಅಗತ್ಯವಿಲ್ಲ. ಈ ಭಯದಿಂದ ಸೋಂಕು ನಿವಾರಣೆಯಾಗದು. ಬದಲಿಗೆ ಹರಡುವ ಅಪಾಯ ಇದೆ. ತಕ್ಷಣವೇ ಹಾಗೇನಾದರೂ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯಬೇಕು ಎಂದು ಅವರು ಸಲಹೆ ಮಾಡಿದರು.
ಕೋವಿಡ್ ರೋಗ ನಿಯಂತ್ರಣಕ್ಕೆ ಹಾಗೂ ಯಾರೊಬ್ಬರಿಗೂ ಹರಡದಿರಲು ಕಡ್ಡಾಯವಾಗಿ ಎಲ್ಲರೂ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಆ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸೈನಿಟೈಜರ್ ಬಳಕೆ ಮಾಡಬೇಕು ಎಂದು ಅವರು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇದ್ದು, ಕೋವಿಡ್ ನಿಯಮಗಳ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.