ಕೋವಿಡ್‍ನಿಂದ ಕಲಾವಿದರ ಬದುಕು ಸಂಕಷ್ಟದಲ್ಲಿ

ಬಳ್ಳಾರಿ ಏ 16 : ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ಆವರಣದಲ್ಲಿ ಶ್ರೀಮಂಜುನಾಥ ಲಲಿತಕಲಾ ಬಳಗ `ವಿಶ್ವಚಿತ್ರಕಲಾ ದಿನಾಚರಣೆ’ ಸಮಾರಂಭವನ್ನು ನಿನ್ನೆ ಹಮ್ಮಿಕೊಂಡಿತ್ತು. ಇದಕ್ಕೆ ಚಾಲನೆ ನೀಡಿ ಮಾತನಾಡಿದ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ. ನನಗೆ ಪದ್ಮಶ್ರೀ ಪ್ರಶಸ್ತಿ ಕರ್ನಾಟಕದ ಜನರು ನೀಡಿದ ಭಿಕ್ಷೆ ಎಂದೇ ಭಾವಿಸಿದ್ದೇನೆ.
ಎಂದರು.
ಯುವ ಚಿತ್ರಕಲಾವಿದ ಮಂಜುನಾಥ ಗೋವಿಂದವಾಡ ಅವರು ತಮ್ಮ ಇಡೀ ಬದುಕನ್ನು ಚಿತ್ರಕಲೆಗೆ ಮೀಸಲಿಟ್ಟಿದ್ದಾರೆ. ಕಲೆಯಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಇದನ್ನೇ ಅವಲಂಬಿಸಿ ಜೀವನ ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ. ಪ್ರತಿ ಹಂತದಲ್ಲೂ ಸವಾಲನ್ನು ಎದುರಿಸಬೇಕಾಗುತ್ತದೆ. ಅಂತಹ ದಿಟ್ಟತನ ಹಾಗೂ ಧೈರ್ಯ ಕಲಾವಿದನಿಗೆ ಇರಬೇಕಾಗುತ್ತದೆ, ಕೋವಿಡ್ ವೈರಸ್ ದಾಳಿಯ ಬಳಿಕ ಎಲ್ಲ ಕಲಾವಿದರ ಬದುಕು ತೀವ್ರ ಸಂಕಷ್ಟದಲ್ಲಿದೆಂದು ಅಭಿಪ್ರಾಯಪಟ್ಟರು.
ಕಲೆ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಕಾರ್ಯಗಳು ಮನುಷ್ಯನ ಬೆಳವಣಿಗೆ ಮೇಲೆ ಬಹುಮುಖ್ಯ ಪಾತ್ರ ನಿರ್ವಹಿಸುತ್ತವೆ. ಪ್ರತಿಯೊಬ್ಬರಲ್ಲೂ ಒಂದು ಕಲೆ ಇದ್ದೇ ಇರುತ್ತದೆ. ಸೂಕ್ತ ಅವಕಾಶ ಸಿಕ್ಕಾಗ ಅದು ಅನಾವರಣಗೊಳ್ಳುತ್ತದೆ. ಬಣ್ಣ ಹಚ್ಚಿಕೊಂಡು ಕುಣಿಯುವುದು, ನಟಿಸುವುದು ಮಾತ್ರ ಕಲೆ ಅಥವಾ ಕಲಾವಿದ ಎಂದು ಭಾವಿಸಬೇಕಾಗಿಲ್ಲ. ನಮಗೆ ತಿಳಿಯದೇ ನಿತ್ಯ ಅದೆಷ್ಟೋ ನಾಟಕಗಳನ್ನು ಪ್ರದರ್ಶನ ಮಾಡುತ್ತಲೇ ಇರುತ್ತೇವೆ. ಕಲೆಯ ಅರ್ಥದ ವ್ಯಾಪ್ತಿ ವಿಸ್ತಾರವಾದದ್ದು. ಬರೆಯುವುದು ಒಂದು ಕಲೆ, ಮಾತನಾಡುವುದು ಒಂದು ಕಲೆ, ಮೇಕಪ್ ಮಾಡಿಕೊಳ್ಳುವುದು ಸಹ ಒಂದು ಕಲೆ. ಹೀಗೆ ನಾನಾ ಕಲೆಗಳನ್ನು ನಾವು ಕಾಣಬಹುದಾಗಿದೆಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ಕೆ.ರಂಗಣ್ಣವರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಪ್ರಾಸ್ತಾವಿಕ ಮಾತನಾಡಿದ ಶ್ರೀಮಂಜುನಾಥ ಲಲಿತಕಲಾ ಬಳಗದ ಅಧ್ಯಕ್ಷ ಮಂಜುನಾಥ ಗೋವಿಂದವಾಡ ಮಾತನಾಡಿ, ಕೋವಿಡ್ ದಾಳಿಯ ಬಳಿಕ ಕಲಾವಿದರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರದ ಸ್ಪಂದನೆ ಬಹಳ ಮುಖ್ಯವಾಗಿದೆ. ಕಲೆಯನ್ನು ನಂಬಿ ಬದುಕುತ್ತಿರುವವರತ್ತ ಸರ್ಕಾರಗಳು ಗಮನ ಹರಿಸಬೇಕಾಗಿದೆ ಎಂದರಲ್ಲದೆ, ಕೋವಿಡ್‍ನಿಂದಾಗಿ ಸರಳವಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಚೋರನೂರು ಕೊಟ್ರಪ್ಪ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ಡಾ.ಅಶ್ವರಾಮು, ಕಲಾವಿದ ಜಿಲಾನಿಬಾಷಾ,ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ನಿಷ್ಠಿ ರುದ್ರಪ್ಪ, ನೃತ್ಯ ಕಲಾವಿದ ಅಭಿಷೇಕ್ ಉಪಸ್ಥಿತರಿದ್ದರು.
ದೊಡ್ಡಬಸವ ಗವಾಯಿ ಡಿ.ಕಗ್ಗಲ್ ಅವರು ಹಿಂದೂಸ್ತಾನಿ ಗಾಯನ ಪ್ರಸ್ತುತಪಡಿಸಿದರು. ಪುಟ್ಟರಾಜ ಡಿ.ಕಗ್ಗಲ್ ತಬಲಾ ಸಾಥ್ ನೀಡಿದರು. ನೀಲಮ್ಮ ಹಾಗೂ ಭಾಗ್ಯಮ್ಮ ಕಾರ್ಯಕ್ರಮ ನಿರ್ವಹಿಸಿದರು. ಮಂಜಮ್ಮ ಜೋಗತಿ ಹಾಗೂ ಡಾ.ಅಶ್ವರಾಮು ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಕಲಾವಿದ ಮಂಜುನಾಥ ಗೋವಿಂದವಾಡ ಅವರು ರಚಿಸಿದ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಇಂದು ಸಹ ದಿನಗಳ ಚಿತ್ರಕಲಾ ಪ್ರದರ್ಶನವಿರುತ್ತದೆ.