ಕೋವಿಡ್‍ದಿಂದ ಪಾರು ಮಾಡಲು ಗಾಣಗಾಪೂರ ದತ್ತಾತ್ರೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ

ಕಲಬುರಗಿ.ಮೇ.28: ಮಹಾಮಾರಿ ಕೊರೋನಾ ಸಂಕಷ್ಟದಿಂದ ಹೊರಬರಲು ದೇಶದ ಜನರು ಈಗಾಗಲೇ ಅನೇಕ ದೇವರ ಮೊರೆ ಹೋಗಿದ್ದು, ಅಫಜಲಪುರ ತಾಲ್ಲೂಕಿನ ಸುಕ್ಷೇತ್ರ ದೇವಲ್ ಗಾಣಗಾಪುರದ ಶ್ರೀ ದತ್ತಾತ್ರೇಯ್ ದೇವಸ್ಥಾನದಲ್ಲಿ ಗುರುವಾರ ಪೂಜೆ ನೆರವೇರಿಸಲಾಯಿತು.
ಪ್ರಸಿದ್ಧ ಗಾಣಗಾಪುರ ದತ್ತಾತ್ರೇಯ್ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ನಿರಂತರ ಸತಾತೋದ್ದಾರ ರುದ್ರಾಭಿಷೇಕ ನಡೆಸಲಾಗುತ್ತಿದೆ. ಗಾಣಗಾಪುರ ನಿಗುರ್ಣ ಮಠದಿಂದ ದೇವಸ್ಥಾನದಲ್ಲಿ ಕಳೆದ ಎರಡು ದಿನಗಳಿಂದ ದಿನದ 24 ಗಂಟೆಗಳ ಕಾಲ ನಿರಂತರ ಸತಾತೋದ್ದಾರ ರುದ್ರಾಭಿಷೇಕ ಮಾಡಲಾಗುತ್ತಿದೆ. ನಿನ್ನೆ ಕೊನೆಯ ದಿನದ ಪೂಜೆ ನೆರವೇರಿಸಲಾಯಿತು. ಇದರೊಂದಿಗೆ ದೇಶದಲ್ಲಿ ತಲೆ ಎತ್ತಿರುವ ಕೊರೋನಾ ಮಹಾಮಾರಿಯನ್ನು ಹೊಡೆದೋಡಿಸಲು ದತ್ತ ದೇವರಿಗೆ ಮೊರೆ ಇಡಲಾಗಿದೆ.
ಪೂಜೆಯಲ್ಲಿ ಹತ್ತಕ್ಕೂ ಹೆಚ್ಚು ಅರ್ಚಕರು ಭಾಗಿಯಾಗಿದ್ದು, ಜನರು ಮಹಾಮಾರಿಯಿಂದ ಆದಷ್ಟು ಬೇಗನೇ ಗುಣಮುಖರಾಗಿ ಹೊರಬರಲಿ ಎಂದು ಪೂಜೆ ಸಲ್ಲಿಕೆ ಮಾಡಲಾಗಿದೆ. ಗಡಿ ಜಿಲ್ಲೆ ಕಲಬುರ್ಗಿಯಲ್ಲಿಯೂ ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿನಿಂದ ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಅನೇಕರು ಸೋಂಕಿಗೆ ಒಳಗಾಗಿದ್ದಾರೆ.