ಕೋವಿಡ್‍ಗೆ ಯುವ ತಾ.ಪಂ. ಸದಸ್ಯ, ಯುವ ನ್ಯಾಯವಾದಿ ಸೇರಿ ಇಬ್ಬರು ಬಲಿ

ಕಲಬುರಗಿ:ಏ.29: ಮಹಾಮಾರಿ ಕೋವಿಡ್ ಎರಡನೇ ಸೋಂಕಿಗೆ ದಿನದಿಂದ ದಿನಕ್ಕೆ ಸಾವು ಹಾಗೂ ಸೋಂಕಿತರ ಸಂಖ್ಯೆ ಅತ್ಯಂತ ಭಯಾನಕ ರೀತಿಯಲ್ಲಿ ಹಬ್ಬುತ್ತಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಜೀವಣಗಿ ತಾಲ್ಲೂಕು ಪಂಚಾಯಿತಿ ಯುವ ಸದಸ್ಯ ಪ್ರವೀಣಕುಮಾರ್ ಅಡವಿಕರ್ ಹಾಗೂ ಯುವ ನ್ಯಾಯವಾದಿ ಕಾ. ಮದುಸರ್ ಮೌಲಾ ಮುಲ್ಲಾ ಅವರು ಕೋವಿಡ್-19ಗೆ ಮೃತಪಟ್ಟಿದ್ದು, ಯುವ ಸಮುದಾಯವನ್ನು ಬೆಚ್ಚಿ ಬೀಳಿಸಿದೆ.
ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಯುವ ನಾಯಕರಾಗಿದ್ದ ಪ್ರವೀಣಕುಮಾರ್ ಅಡವಿಕರ್ ಅವರು ತಾಲ್ಲೂಕು ಪಂಚಾಯಿತಿ ಸದಸ್ಯರಾಗಿದ್ದರು. ಅವರು ಕೋವಿಡ್ ಸೋಂಕಿಗೆ ಮೃತಪಟ್ಟಿದ್ದಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡ ವಿಜಯಕುಮಾರ್ ಜಿ. ರಾಮಕೃಷ್ಣ ಅವರು ತೀವ್ರ ಸದಂತಾಪ ವ್ಯಕ್ತಪಡಿಸಿದ್ದಾರೆ.
ಅಡವಿಕರ್ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ಆಘಾತವಾಯಿತು. ಭಗವಂತ ಅವರ ಆತ್ಮಕ್ಕೆ ಚಿರಶಾಂತಿಯನ್ನು ಹಾಗೂ ಅವರ ಕುಟುಂಬದ ಸದಸ್ಯರಿಗೆ ದು:ಖ ಭರಿಸುವ ಶಕ್ತಿ ನೀಡಲಿ ಎಂದು ವಿಜಯಕುಮಾರ್ ಜಿ. ರಾಮಕೃಷ್ಣ ಅವರು ಪ್ರಾರ್ಥಿಸಿದ್ದಾರೆ.
ಅದೇ ರೀತಿ ಯುವ ನ್ಯಾಯವಾದಿ, ಹೋರಾಟಗಾರ ಕಾಮ್ರೇಡ್ ಮಧುಸರ್ ಮೌಲಾಮುಲ್ಲಾ ಅವರು ಸಹ ಕೋವಿಡ್ ಸೋಂಕಿಗೆ ಮೃತಪಟ್ಟಿದ್ದಾರೆ. ಆಳಂದ್ ತಾಲ್ಲೂಕಿನ ತಡೋಳಾ ಗ್ರಾಮದ ಯುವ ನ್ಯಾಯವಾದಿ ಹಾಗೂ ಅಖಿಲ ಭಾರತ ಯುವ ಜನ ಒಕ್ಕೂಟದ ರಾಜ್ಯ ಮಂಡಳಿಯ ಸದಸ್ಯ, ಆಳಂದ್ ತಾಲ್ಲೂಕಿನ ಅಧ್ಯಕ್ಷ, ಎಐಟಿಯುಸಿ ಕಾರ್ಮಿಕ ಸಂಘಟನೆಯ ತಾಲ್ಲೂಕು ಅಧ್ಯಕ್ಷರಾಗಿ ಯುವ ನ್ಯಾಯವಾದಿಯಾಗಿಯೂ ಸೇವೆ ಸಲ್ಲಿಸುತ್ತಿದ್ದ ಕಾ. ಮದುಸರ್ ತಂದೆ ಮೌಲಾ ಮುಲ್ಲಾ ಅವರ ವಯಸ್ಸು ಕೇವಲ 34. ಈ ಯೌವನಾವಸ್ಥೆಯಲ್ಲಿಯೇ ಕೊರೋನಾ ಸೋಂಕಿಗೆ ಬಲಿಯಾಗಿದ್ದು ಹೋರಾಟಗಾರರಿಗೆ ತೀವ್ರ ಆತಂಕ ಹುಟ್ಟಿಸಿದೆ.
ತಂದೆ ಕಾ. ಮೌಲಾ ಮುಲ್ಲಾ ಅವರ ಎಡ ಪಕ್ಷವಾದ ಸಿಪಿಐ ಪಕ್ಷದ ಸಿದ್ದಾಂತವನ್ನು ನಂಬಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಹೋರಾಟ ಮಾಡುತ್ತಿದ್ದರು. ಅನೇಕ ಹೋರಾಟಗಳಲ್ಲಿ ಯಶಸ್ವಿಯಾಗಿದ್ದರು. ಇಂತಹ ಹೋರಾಟಗಾರರನ್ನು ಕಳೆದುಕೊಂಡಿರುವುದು ವಿಶೇಷವಾಗಿ ಯುವ ಸಮುದಾಯಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್.ಎಸ್. ಪದಕಿ, ಕಾರ್ಯದರ್ಶಿ ಪ್ರಭುದೇವ್ ಯಳಸಂಗಿ, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಕುಮಾರ್, ಡಾ. ಪಿ. ಸಂಪತ್‍ರಾವ್, ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ್ ಮಾಡ್ಯಾಳ್, ಆಳಂದ್ ತಾಲ್ಲೂಕಿನ ಎಐಟಿಯುಸಿ ಕಾರ್ಯದರ್ಶಿ ದತ್ತಾತ್ರೇಯ್ ಕಬಾಡೆ, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಕಲ್ಯಾಣಿ ತುಕ್ಕಾಣಿ, ಮಹಿಳಾ ಹೋರಾಟಗಾರರಾದ ಪದ್ಮಾವತಿ ಮಾಲಿಪಾಟೀಲ್, ಎಐಎಸ್‍ಎಫ್ ವಿದ್ಯಾರ್ಥಿ ಮುಖಂಡರು, ಎಐಕೆಎಸ್ ರೈತ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.