ಕೋವಿಡ್‍ಗೆ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಲಿ

ಸಿರುಗುಪ್ಪ,ಅ.31: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಬಿ.ಕೆಂಪಳಮ್ಮ(48) ಕೋವಿಡ್‍ನಿಂದಾಗಿ ನಿನ್ನೆ ಸಾವನ್ನಪ್ಪಿದ್ದಾರೆ. ಅವರು ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿನಿಂದ ಇಲ್ಲಿನ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಜಗಳೂರು ತಾಲ್ಲೂಕಿನ ಲಿಂಗಣ್ಣನಹಳ್ಳಿ ಅವರು ಪತಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ನಿನ್ನೆ ಸ್ವಗ್ರಾಮದಲ್ಲಿ ನಡೆಯಿತು. ಪಟ್ಟಣ ಪಂಚಾಯ್ತಿ ಕಚೇರಿಯಲ್ಲಿ ನಿನ್ನೆ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಶಾಸಕರು, ತಹಶೀಲ್ದಾರ್ ಎಸ್.ಬಿ.ಕೂಡಲಗಿ ಹಾಗೂ ಸಿಬ್ಬಂದಿ, ಸದಸ್ಯರು ಕೆಂಪಳಮ್ಮ ಅವರಿಗೆ ಸಂತಾಪ ಸೂಚಿಸಿದರು. ಶಾಸಕ ಎಂ.ಎಸ್.ಸೋಮಲಿಂಗಪ್ಪ ಮಾತನಾಡಿ, ಕೆಂಪಳಮ್ಮ ಅವರು ಕ್ರಿಯಾಶೀಲ, ಪ್ರಾಮಾಣಿಕತೆ ಹಾಗೂ ನಿಷ್ಠೆಗೆ ಹೆಸರಾಗಿದ್ದರು. ಮುಖ್ಯಾಧಿಕಾರಿಯಾಗಿ ತೆಕ್ಕಲಕೋಟೆ ಪಟ್ಟಣವನ್ನು ಅಭಿವೃದ್ಧಿಪಡಿಸಲು ಶ್ರಮಿಸಿದ್ದರು. ಇಂತಹ ಅಧಿಕಾರಿ ಅಗಲಿಕೆಯು ದುಃಖದ ಸಂಗತಿಯಾಗಿದೆಂದರು.