ಕೋವಿಡ್‍ಗೆ ಡೋಂಟ್ ಕೇರ್ ಸಡಗರ ಸಂಭ್ರಮದಿಂದ ದಸರಾ ಆಚರಣೆ

ಬಳ್ಳಾರಿ, ಅ.26: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿನ ಪ್ರಮಾಣ ಕಡಿಮೆ ಆಗುತ್ತಿರುವುದರಿಂದ ಜನತೆ ಅದನ್ನು ‘ಡೋಂಟ್ ಕೇರ್’ ಮಾಡಿ ಇಂದು ದಸರಾ ಹಬ್ಬದ ಆಚರಣೆ ಬಹುತೇಕವಾಗಿ ಸಮಾಜಿಕ ಅಂತರ, ಮಾಸ್ಕ್‍ಗಳಿಲ್ಲದೆ ಸಡಗರ ಸಂಭ್ರಮದಿಂದಲೇ ಆಚರಿಸಿರುವುದು ಕಂಡು ಬಂದಿದೆ.
ಪ್ರತಿವರ್ಷದಂತೆ ನಗರದಲ್ಲಿರುವ ಬನ್ನಿ ಮಹಾಂಕಾಳಿ ದೇವಸ್ಥಾನ ಮತ್ತು ಮರಗಳ ಬಳಿ ಜನರು ಅದರಲ್ಲೂ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನದಾಗಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಈ ಸಂದರ್ಬದಲ್ಲಿ ಬಹುತೇಕರು ಮಾಸ್ಕ್ ಧರಿಸಿರಲಿಲ್ಲ, ಸಾಮಾಜಿಕ ಅಂತರವಂತೂ ಇಲ್ಲವೇ ಇಲ್ಲ. ಸೋಂಕಿನ ಭಯಾನಕತೆ ಬಗ್ಗೆ ಅರಿವಿದ್ದ ಕೆಲವರು ಮಾತ್ರ ಮಾಸ್ಕ್ ಧರಿಸಿದ್ದು ಕಂಡು ಬಂತು.
ನಗರದ ಕನಕ ದುರ್ಗಮ್ಮ, ಪಟೇಲ್ ನಗರದ ಸಣ್ಣ ದುರ್ಗಮ್ಮ, ಸಂಗನಕಲ್ಲು ರಸ್ತೆಯ ಶಾರದಾ ದೇವಲಾಯ ಸೇರಿದಂತೆ ಅನೇಕ ಶಕ್ತಿ ದೇವತೆಗಳ ದೇವಸ್ಥಾನಗಳಿಗೆ ಜನರು ಭೇಟಿ ನೀಡಿ ದರ್ಶನ ಪಡೆದು ನಮನ ಸಲ್ಲಿಸಿದ್ದು ಕಂಡು ಬಂತು. ದೇವಸ್ಥಾನಗಳ ಬಳಿ ಒಂದಿಷ್ಟು ಮಾಸ್ಕ್ ಧರಿಸುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿತ್ತು, ಆದರೆ ಸಮಾಜಿಕ ಅಂತರ ಕಡಿಮೆ ಇತ್ತು.
ಸಂಜೆ ನಗರದಲ್ಲಿ ಪಲ್ಲಿಕ್ಕಿ ಉತ್ಸವ ನಡೆಯಲಿದೆ.ನಗರದ ವಿವಿಧ ದೇವಾಲಯಗಳ ಪಲ್ಲಕ್ಕಿಗಳು ಕಲ್ಯಾನ ಮಠಕ್ಕೆ ಸಾಗಿ ಬನ್ನಿ ಮುಡಿಯಲಿವೆ.