ಕೋವಿಡ್‌ ಕರ್ತವ್ಯದಿಂದ ಶಿಕ್ಷಕರಿಗೆ ವಿನಾಯಿತಿ ನೀಡುವಂತೆ ಮನವಿ

ಭಟ್ಕಳ, ಮೇ ೪- ಕೋವಿಡ್-19 ಕಾರ್ಯಕ್ಕಾಗಿ ಸರ್ಕಾರ ಶಿಕ್ಷಕರನ್ನು ನಿಯೋಜಿಸುತ್ತಿದ್ದು ಇದರಿಂದಾಗಿ ಶಿಕ್ಷಕ ಸಮುದಾಯ ಹಾಗೂ ಪಾಲಕರು ಕಳವಳ ವ್ಯಕ್ತಪಡಿಸುತ್ತಿದ್ದು ರಾಜ್ಯದಲ್ಲಿ ಶಿಕ್ಷಕರನ್ನು ಕೋವಿಡ್ ಕಾರ್ಯದಿಂದ ವಿನಾಯತಿ ನೀಡಬೇಕೆಂದು ಆಲ್ ಇಂಡಿಯಾ ಐಡಿಯಾಲ್ ಟೀಚರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಎಂ.ಆರ್.ಮಾನ್ವಿ ಸರ್ಕಾರವನ್ನು ಕೇಳಿಕೊಂಡಿದ್ದಾರೆ.

ಈ ಕುರಿತಂತೆ ಸೋಮವಾರ ಇಲ್ಲಿನ ಸಹಾಯಕ ಆಯುಕ್ತರ ಮೂಲಕ ಶಿಕ್ಷಣ ಸಚಿವರಿಗೆ ಮನವಿಪತ್ರವನ್ನು ರವಾನಿದ್ದಾರೆ. ಕೋವಿಡ್ ಎರಡನೆ ಅಲೆಗೆ ರಾಜ್ಯದ ಜನತೆ ತತ್ತರಿಸಿ ಹೋಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಹಲವು ಕಟ್ಟೆಚ್ಚರ ಕ್ರಮಗಳನ್ನು ನಿರ್ವಹಿಸಲಾಗುತ್ತಿದೆ. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರನ್ನು ರಾಜ್ಯಸರ್ಕಾರ ಕೋವಿಡ್-19 ಕಾರ್ಯಕ್ಕೆ ನಿಯೋಜಿಸಿದೆ. ಉ.ಪ ರಾಜ್ಯದಲ್ಲಿ 500ಕ್ಕೂ ಹೆಚ್ಚು ಶಿಕ್ಷಕರು ಕೋವಿಡ್ ನಿಂದ ಮೃತಪಟ್ಟಿದ್ದಾಗಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ  ರಾಜ್ಯ ಶಿಕ್ಷಕರನ್ನು ಕೋವಿಡ್ ಕಾರ್ಯದಿಂದ ವಿನಾಯತಿ ನೀಡಿ ಅದರ ಬದುಲು ಎನ್.ಜಿಒ, ಸಾಮಾಜಿಕ ಕಾರ್ಯಕರ್ತರು ಹಾಗೂ ಯುವಕರ ಸೇವೆಯನ್ನು ಪಡೆದುಕೊಳ್ಳಬೇಕೆಂದು ಮನವಿ ಪತ್ರದಲ್ಲಿ ವಿನಂತಿಸಿಕೊಳ್ಳಲಾಗಿದೆ. ಶಿಕ್ಷಕರನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸುವುದು ಅನಿವಾರ್ಯವೇ ಆದಲ್ಲಿ ಅವರಿಗ ಕೋವಿಡ್ ಫ್ರಂಟ್ ಲೈನ್ ವಾರಿಯರ್ಸ್ ಎಂದು ಗುರುತಿಸಿ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಬೇಕೆಂದು ವಿನಂತಿಸಿದ್ದು, ಈ ಕಾರ್ಯಕ್ಕಾಗಿ ಸಾಮಾಜಿಕ ಕಾರ್ಯಕರ್ತರ ಹಾಗೂ ಯುವಕರ ಸೇವೆಯನ್ನು ಪಡೆದುಕೊಳ್ಳಬೇಕು, ಶಿಕ್ಷಕರಿಗೆ ಕೋವಿಡ್ ಕೆಲಸ ಅನಿವಾರ್ಯ ಎಂದಾದಲ್ಲಿ ಶಿಕ್ಷಕರಿಗೆ ಫ್ರಂಟ್ ಲೈನ್ ವಾರಿಯರ್ಸ್ ಎಂದು ಘೋಷಿಸಬೇಕು, ಕರ್ತವ್ಯನಿತರ ಶಿಕ್ಷಕರಿಗೆ ಪಿ.ಪಿ ಕಿಟ್ ಮುಂತಾದವ ಸೌಲಭ್ಯಗಳನ್ನು ನೀಡಬೇಕು, ಎಲ್ಲ ಶಿಕ್ಷಕರಿಗ ಉಚಿತ ವ್ಯಾಕ್ಸಿನ್ ನೀಡಬೇಕು, ಸ್ವ ಸ್ಥಳದಲ್ಲೇ ಕರ್ತವ್ಯ ನಿರ್ವಹಿಸುವ ಅವಕಾಶ ಮಾಡಿಕೊಡಬೇಕು ಮತ್ತು ಅನಾರೋಗ್ಯ ಮತ್ತು 50ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ವಿನಾಯತಿ ನೀಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಭಟ್ಕಳ ತಾಲೂಕು ಅಧ್ಯಕ್ಷ ಇಮ್ರಾನ್ ಮುಲ್ಲಾ ಉಪಸ್ಥಿತರಿದ್ದರು.