ಕೋವಿಡ್‌ನಿಂದ ರಕ್ಷಣೆಗಾಗಿ ಮಕ್ಕಳಿಗೆ ಲಸಿಕೆ ನೀಡಿ

ಕೋಲಾರ,ನ.೧೫: ದೇಶದ ಮುಂದಿನ ಭವಿಷ್ಯವಾದ ಮಕ್ಕಳ ಆರೋಗ್ಯರಕ್ಷಣೆ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಇಡೀ ದೇಶದ ಜನತೆಗೆ ಉಚಿತ ಕೋವಿಡ್ ಲಸಿಕೆ ನೀಡಿದಂತೆ ಮಕ್ಕಳಿಗೂ ಕೂಡಲೇ ಲಸಿಕೆ ನೀಡಲು ಕ್ರಮವಹಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್ ಮನವಿ ಮಾಡಿದರು.
ನಗರದ ಕಾರಂಜಿಕಟ್ಟೆಯ ನಲ್ಲೂರಮ್ಮ ಅನಾಥಾಲಯದಲ್ಲಿ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಮಕ್ಕಳ ದಿನಾಚರಣೆ ಕಾರ್ಯಕ್ರಮ ಆಚರಿಸಿ, ಮಕ್ಕಳಿಗೆ ಸಿಹಿ ವಿತರಿಸಿದ ಅವರು ನೆಹರು ಅವರ ಕನಸು ನನಸಾಗಲು ಮಕ್ಕಳ ಆರೋಗ್ಯ ರಕ್ಷಣೆಗೆ ಒತ್ತು ನೀಡುವುದಾಗಿ ತಿಳಿಸಿದರು.
ಕೋವಿಡ್ ಮಹಾಮಾರಿ ದೂರವಾಗುವ ಕಾಲ ಬಂದಿದೆ ಎನ್ನುತ್ತಿದ್ದರೂ, ಮಕ್ಕಳಿಗೆ ಲಸಿಕೆ ನೀಡದ ಕಾರಣ ಆತಂಕ ಇನ್ನೂ ಮನೆ ಮಾಡಿದೆ ಈ ಹಿನ್ನಲೆಯಲ್ಲಿ ಮಕ್ಕಳಿಗೆ ಸರ್ಕಾರ ಕೂಡಲೇ ಉಚಿತ ಲಸಿಕೆ ಹಾಕಲು ಕ್ರಮವಹಿಸಬೇಕು ಎಂದರು.
ಮಕ್ಕಳು ಈ ದೇಶದ ಆಸ್ತಿಯಾಗಿದ್ದಾರೆ, ಅವರ ಆರೋಗ್ಯ ರಕ್ಷಣೆಗೆ ತಾಯಂದಿರ ಹೊಟ್ಟೆಯಲ್ಲಿರುವಾಗಿನಿಂದಲೇ ಒತ್ತು ನೀಡುವ ಮೂಲಕ ಅಂಗವೈಕಲ್ಯ ತಪ್ಪಿಸುವ ಹೊಣೆ ಸರ್ಕಾರ ಮತ್ತು ಪ್ರತಿಯೊಬ್ಬರ ಮೇಲಿದೆ ಎಂದರು.ದೇಶದ ಪ್ರಥಮ ಪ್ರಧಾನಿಯಾಗಿದ್ದ ನೆಹರು ಅವರು ತಮ್ಮ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲು ಕರೆ ನೀಡುವ ಮೂಲಕ ಅವರಿಗೆ ಮಕ್ಕಳ ಮೇಲಿದ್ದ ಪ್ರೀತಿ,ಕಾಳಜಿಗೆ ಸಾಕ್ಷಿಯಾಗಿದ್ದರು ಎಂದು ತಿಳಿಸಿದರು.
ಅನಾಥ ಮಕ್ಕಳ ನೆರವಿಗೆ ತಾವು ನಿರಂತರವಾಗಿ ನಿಲ್ಲುವುದಾಗಿ ತಿಳಿಸಿದ ಅವರು, ಈ ಮಕ್ಕಳಿಗಾಗಿ ಪ್ರತಿ ವರ್ಷವೂ ಒಂದಿಷ್ಟು ನೆರವು ಒದಗಿಸುವ ತಮ್ಮ ಪ್ರಯತ್ನ ಮುಂದುವರೆಸುವುದಾಗಿ ತಿಳಿಸಿದರು. ಕಾಂಗ್ರೆಸ್ ಎಸ್ಸಿಎಸ್ಟಿ ವಿಭಾಗದ ಬ್ಲಾಕ್ ಅಧ್ಯಕ್ಷ ಗಂಗಮ್ಮನಪಾಳ್ಯದ ರಾಮಯ್ಯ, ಮಕ್ಕಳ ದೇವರಿಗೆ ಸಮಾನ, ಅದರಲ್ಲೂ ಯಾವುದೇ ತಪ್ಪು ಮಾಡದಿದ್ದರೂ ವಿಕಲತೆ ಹೊಂದಿರುವ ಮಕ್ಕಳ ಬಗ್ಗೆ ಕಾಳಜಿ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲ ಸಂಘ ಸಂಸ್ಥೆಗಳು ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಚಾಂದ್‌ಪಾಷ ಮತ್ತಿತರರಿದ್ದರು.