ಕೋವಿಡ್‌ಗೆ ಲಸಿಕೆ ಮೋದಿ ಬದ್ಧತೆ ಟೆಡ್ರೋಸ್ ಮೆಚ್ಚುಗೆ

ನ್ಯೂಯಾರ್ಕ್, ನ.೧೨- ಕೋವಿಡ್-೧೯ ವಿರುದ್ಧದ ಹೋರಾಟ ಹಾಗೂ ಲಸಿಕೆ ತಯಾರಿಕೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬದ್ಧತೆಗೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿ ಟ್ವೀಟ್ ಮಾಡಿರುವ ಅವರು, ಕೋವಿಡ್ ಸೋಂಕು ಜಗತ್ತಿಗೆ ಸವಾಲಾಗಿದೆ. ಪರಸ್ಪರ ಸಹಕಾರದೊಂದಿಗೆ ಮಾತ್ರ ಇದನ್ನು ಕೊನೆಗಾಣಿಸಲು ಸಾಧ್ಯ ಎಂದು ನುಡಿದಿದ್ದಾರೆ.
ಕೋವಿಡ್ ವಿರುದ್ಧದ ಹೋರಾಟ, ಲಸಿಕೆ ತಯಾರಿಕೆ ಹಾಗೂ ಇತರ ದೇಶಗಳಿಗೆ ಪೂರೈಕೆ ಮಾಡಲು ಭಾರತ ತನ್ನ ಲಸಿಕೆ ಉತ್ಪಾದನಾ ಸಾಮರ್ಥ್ಯ ಬಳಕೆಯ ಬಗ್ಗೆ ತೋರುತ್ತಿರುವ ಬದ್ಧತೆಗೆ ಧನ್ಯವಾದ.
ವೈದ್ಯ ವಿಜ್ಞಾನ ಹಾಗೂ ಔಷಧಿ ಕ್ಷೇತ್ರದಲ್ಲಿ ಪರಸ್ಪರ ಸಹಭಾಗಿತ್ವದ ಮೂಲಕ ಜ್ಞಾನ, ಸಂಶೋಧನೆಯ ವಿನಿಮಯ ಮತ್ತು ಪರಿಣಾಮಕಾರಿ ತರಬೇತಿಯೊಂದಿಗೆ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಟ ಮಾಡಬೇಕಿದೆ. ಈ ಬಗ್ಗೆ ಭಾರತ ಜಾಗತಿಕಮಟ್ಟದಲ್ಲಿ ನೆರವು ನೀಡಲಿದೆ ಎಂದು ಅವರು ಹೇಳಿದರು