ಕೋವಿಡ್ಗೆ ಒಂದೇ ವಾರದಲ್ಲಿ ಸಹೋದರರಿಬ್ಬರ ಬಲಿ

ಬೀದರ, ಏ. 27; ಕೋವಿಡ್ ಬೆಂಗಳೂರು ನಗರ ಮಾತ್ರವಲ್ಲ ವಿವಿಧ ರಾಜ್ಯಗಳಲ್ಲಿ ಸಹ ಹೆಚ್ಚಾಗುತ್ತಿದೆ. ಬೀದರ್ ಜಿಲ್ಲೆಯಲ್ಲಿಯೂ ಕೋವಿಡ್ ಪ್ರಕರಣಗಳು ಹೆಚ್ಚಿದ್ದು, ಒಂದೇ ವಾರದಲ್ಲಿ ಕೋವಿಡ್‌ಗೆ ಸಹೋದರರಿಬ್ಬರು ಬಲಿಯಾಗಿದ್ದಾರೆ.

ಬೀದರ್ ತಾಲೂಕಿನ ಅಷ್ಟೂರ್ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಪಿಕೆಪಿಎಸ್) ಅಧ್ಯಕ್ಷರಾಗಿದ್ದ ಸಹೋದರರಿಬ್ಬರು ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ.

ಅಷ್ಟೂರ್ ಪಿಕೆಪಿಎಸ್ ಅಧ್ಯಕ್ಷರಾಗಿದ್ದ ಶಂಕರರಾವ್ ಪಾಟೀಲ (61) ಏಪ್ರಿಲ್ 20ರಂದು ಕೋವಿಡ್ ಸೋಂಕಿಗೆ ಬಲಿಯಾಗಿದ್ದರು.ಅದಾದ ವಾರದೊಳಗೆ ಏಪ್ರಿಲ್ 26ರಂದು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಮಹಾದೇವ ಪಾಟೀಲ (52) ಸಾವನ್ನಪ್ಪಿದ್ದಾರೆ.

ಸಹೋದರರ ಅಂತ್ಯಕ್ರಿಯೆ ಅಷ್ಟೂರ್ ಗ್ರಾಮದ ಜಮೀನಿನಲ್ಲಿ ನಡೆಯಿತು. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೋಂಕಿನ ಪ್ರಕರಣಗಳಿಂದ ಬೀದರ್ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದೆ.

ಕೋವಿಡ್ ಸೋಂಕಿನ ಬಗ್ಗೆ ಜನರಲ್ಲಿ ತೀವ್ರ ಆತಂಕ ಎದುರಾಗಿದೆ. ಸಾವಿನ ಸಂಖ್ಯೆಯೂ ನಿತ್ಯ ಏರಿಕೆಯಾಗುತ್ತಿದ್ದು, ತೀವ್ರ ಕಳವಳ ಮೂಡಿಸಿದೆ. ಜಿಲ್ಲೆಯಲ್ಲಿ ಭಾನುವಾರದ ವರದಿಯಲ್ಲಿ 406 ಸೋಂಕು ದೃಢಪಟ್ಟಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.