ಕೋಳೂರು ಗ್ರಾಮಕ್ಕೆ ಕುಡಿಯುವ ನೀರಿನ ಕೆರೆ ನಿರ್ಮಿಸಲು ಮನವಿ


ಸಂಜೆವಾಣಿ ವಾರ್ತೆ
ಕುರುಗೋಡು:ಸೆ.25: ಪಟ್ಟಣದಲ್ಲಿ ಕೋಳೂರು ಗ್ರಾಮಸ್ಥರಿಗೆ ಕುಡಿಯುವ ನೀರಿನ ಕೆರೆಗಾಗಿ ಮತ್ತು ನಿವೇಶನ ರಹಿತರಿಗೆ ನಿವೇಶನಕ್ಕಾಗಿ ಆಗ್ರಹಿಸಿ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಗ್ರಾಮೀಣ ಸ್ಥಳೀಯ ಸಮಿತಿ ವತಿಯಿಂದ ಪ್ರತಿಭಟನೆ ಮಾಡಿ ಮಾನ್ಯ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಪ್ರತಿಭಟನೆಯನ್ನು ಉದ್ದೇಶಿಸಿ ಪಕ್ಷದ ಗ್ರಾಮೀಣ ಸಮಿತಿ ಕಾರ್ಯದರ್ಶಿಗಳಾದ ಎ.ದೇವದಾಸ್ ಅವರು ಮಾತನಾಡಿ, ಕೋಳೂರು ಗ್ರಾಮವು ಹೋಬಳಿ ಕೇಂದ್ರವಾಗಿದ್ದು ಇಲ್ಲಿ ಸುಮಾರು 2200 ಕ್ಕೂ ಹೆಚ್ಚು ಮನೆಗಳಿದ್ದು ಕುಡಿಯುವ ನೀರಿಗಾಗಿ ಪರಿತಪಿಸಬೇಕಾಗಿದೆ. ಗ್ರಾಮದ ವ್ಯಾಪ್ತಿಯಲ್ಲಿ  ಕೊಳವೆ ಬಾವಿ ಕೊರೆದರು ಸಹ ಕುಡಿಯಲು ಯೋಗ್ಯವಾದ ನೀರು ಸಿಗುತ್ತಿಲ್ಲ. ಈಗಾಗಲೇ ಗ್ರಾಮದ ಬಳಿ ಗ್ರಾಮಸ್ಥರ ಹೋರಾಟದ ಫಲವಾಗಿ ಕುಡಿಯುವ ನೀರಿನ ಕೆರೆಯ ನಿರ್ಮಾಣ ಕಾಮಗಾಗಿ ಪ್ರಾರಂಭಗೊಂಡಿತ್ತು, ಅದು ಈಗ ಸ್ಥಗಿತವಾಗಿದೆ, ಕೆರೆ ಕಾಮಗಾರಿಯನ್ನು ಈ ಕೂಡಲೇ ಕೈಗೆತ್ತಿಕೊಂಡು, ಅತೀ ಬೇಗನೆ ಸಂಪೂರ್ಣ ಗೊಳಿಸಿ ಕುಡಿಯುವ ನೀರಿನ ಕೆರೆಯನ್ನು ನಿರ್ಮಿಸಿ ಕೊಡಬೇಕು ಹಾಗೂ ಈಗಾಗಲೇ ಗ್ರಾಮ ಪಂಚಾಯಿತಿ ವತಿಯಿಂದ ಅವಶ್ಯಕತೆ ಇರುವ ಜನರಿಗೆ ಮತ್ತು ಕೂಲಿ ಕಾರ್ಮಿಕರಿಗೆ ನಿವೇಶನ ನೀಡುವ ಬಗ್ಗೆ ಮಾಹಿತಿ ನೀಡಿ 2017-18 ರಲ್ಲಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿದ್ದಾರೆ, ಹಾಗಿದ್ದರೂ ಈವರೆಗೂ ಅರ್ಜಿದಾರರಿಗೆ ನಿವೇಶನ ನೀಡಲು ಯಾವುದೇ ಕ್ರಮಕ್ಕೆ ಪ್ರಯತ್ನಿಸಿಲ್ಲವಾದ್ದರಿಂದ ಆಯ್ಕೆ ವರದಿಯು ಸ್ಥಗಿತಗೊಂಡಿದೆ. ಆದ್ದರಿಂದ ಸರ್ಕಾರವು ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ  ಅರ್ಜಿದಾರರಿಗೆ ನಿವೇಶನ ನೀಡಬೇಕೆಂದು, ಈ ಹಿಂದೆ ಒಂದು ವರ್ಷದ ನಾಲ್ಕು ತಿಂಗಳ ಕೆಳಗೆ ಮಾನ್ಯ ತಹಶೀಲ್ದಾರರು ಕೋಳೂರಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ಬಂದಿದ್ದಾಗ ಮನವಿ ಪತ್ರವನ್ನು ನೀಡಿದ್ದೆವು, ಆದರೆ ಇದುವರೆಗೂ ಸಹ ಯಾವುದೇ ಪ್ರಗತಿ ಕಾರ್ಯ ನಡೆದಿಲ್ಲವಾದ್ದರಿಂದ ಇಂದು ಮತ್ತೊಮ್ಮೆ ಈ ಸಮಸ್ಯೆ ಪರಿಹಾರಕ್ಕಾಗಿ ಪ್ರತಿಭಟನೆ ಮಾಡುವ ಪರಿಸ್ಥಿತಿ  ಬಂದಿದೆ,  ಈಗಲಾದರೂ ವಸತಿ ಮತ್ತು ಕುಡಿಯುವ ನೀರಿನ  ಅನಿವಾರ್ಯತೆಯನ್ನು ತಾಲೂಕು ಆಡಳಿತ  ಮನಗಂಡು  ಅತೀ ಬೇಗನೆ ಈ ಬೇಡಿಕೆಗಳನ್ನು ಈಡೇರಿಸಬೇಕು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟಕ್ಕೆ ಗ್ರಾಮಸ್ಥರು ಮುಂದಾಗಬೇಕಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ಸಮಿತಿ ಸದಸ್ಯರಾದ ಬಸಣ್ಣ, ಪಂಪಾಪತಿ, ಜಗಧಿಶ್, ಗುರಳ್ಳಿ ರಾಜ ಗ್ರಾಮಸ್ತರಾದ ಶೇಕಣ್ಣ, ಲಿಂಗಪ್ಪ, ರಾಮಪ್ಪ ಸೇರಿದಂತೆ ಇತರರು ಇದ್ದರು

One attachment • Scanned by Gmail