ಕೋಳೂರಿನಲ್ಲಿ  ಶೌಚಾಲಯಕ್ಕಾಗಿ ಮನವಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.08: ಇಲ್ಲಿಗೆ ಸಮೀಪದ  ಕೋಳೂರು ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕೆಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ, ಏ ಐ ಡಿ ವೈ.ಓ ಯುವಜನ ಸಂಘಟನೆ ಮತ್ತು ಮಹಿಳಾ ಸಂಸ್ಕೃತಿಕ ಸಂಘಟನೆ  ಇಂದು ಮನವಿ  ಸಲ್ಲಿಸಿವೆ.
ಇಂದಿಗೂ ಹಳ್ಳಿಗಳಲ್ಲಿ ಮಹಿಳೆಯರಿಗೆ ಸುರಕ್ಷಿತ ಹಾಗೂ ಸ್ವಚ್ಛವಾದ ಶೌಚಾಲಯಗಳಿಲ್ಲ. ಸ್ವಚ್ಛ ಭಾರತ ಅಭಿಯಾನದಡಿ ಮನೆಮನೆಗೂ ಶೌಚಾಲಯ ಎಂದು ಘೋಷಣೆಯಾದರೂ ಕೂಡ ಎಲ್ಲ ಮನೆಗಳಿಗೂ ಶೌಚಾಲಯಗಳಿಲ್ಲ. ಕೆಲವೊಂದು ಮನೆಗಳಿಗೆ ಶೌಚಾಲಯ ಇದ್ದರೂ ನೀರಿನ ಸೌಲಭ್ಯವಿಲ್ಲದೆ ಅವುಗಳು ಬಳಕೆಗೆ ಯೋಗ್ಯವಾಗಿಲ್ಲ.
ಜೊತೆಗೆ ಮದುವೆ,ಹಬ್ಬ ಹಾಗೂ ಜಾತ್ರೆಗಳಂತ ವಿಶೇಷ ಸಂದರ್ಭಗಳಲ್ಲಿ ಜನಗಳು ಪರದಾಡುವಂತಾಗುತ್ತದೆ. ಬೇರೆ ದಾರಿ ಕಾಣದೆ ಬಯಲು ಶೌಚಕ್ಕೆ ಮೊರೆ ಹೋಗುತ್ತಾರೆ. ಇದರಿಂದಾಗಿ ಹಲವಾರು ಕಾಯಿಲೆಗಳು ಹರಡುತ್ತವೆ. ಹಾಗಾಗಿ ಗ್ರಾಮದ ಜನತೆಯ ಮುಖ್ಯವಾಗಿ ಮಹಿಳೆಯರ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಕೋಳೂರು ಗ್ರಾಮದ ಎಸ್.ಸಿ ಕಾಲೋನಿಯಲ್ಲಿ ಈಗಾಗಲೇ ಇರುವ ಸಾರ್ವಜನಿಕ ಶೌಚಾಲಯ ನೀರಿಲ್ಲದೆ ಸರಿಯಾದ ಬಳಕೆ ಇಲ್ಲದೆ ನಿಷ್ಪ್ರಯೋಜಕವಾಗಿದೆ. ಹಾಗಾಗಿ ಈ ಕೂಡಲೇ ಈ ಶೌಚಾಲಯಕ್ಕೆ ನೀರಿನ ಸರಬರಾಜು ಮತ್ತು ಅವಶ್ಯಕ ಸೌಲಭ್ಯ ಒದಗಿಸಬೇಕು ಸ್ವಚ್ಛತೆಗೆ ಒಬ್ಬರನ್ನು ಇಡಬೇಕು ಹಾಗೂ ಅವಶ್ಯಕತೆ ಇರುವ ಕಡೆ ಜನಸಂಖ್ಯೆಗೆ ತಕ್ಕಂತೆ ಗ್ರಾಮದಲ್ಲಿ ಇನ್ನೂ 3 ಕಡೆ  ಶೌಚಾಲಯಗಳನ್ನು ಎಲ್ಲಾ ಸೌಲಭ್ಯಗಳೊಂದಿಗೆ ಸಾರ್ವಜನಿಕ ನಿರ್ಮಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆಯಲ್ಲಿ ಎಐಡಿವೈಒ ಯುವಜನ ಸಂಘಟನೆಯ ಜಿಲ್ಲಾಧ್ಯಕ್ಷ ಕೊಳೂರು ಪಂಪಾಪತಿ, ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್, ಎಐಕೆಕೆಎಮ್ ಎಸ್ ರೈತರ ಸಂಘಟನೆಯ ತಾಲೂಕು ಅಧ್ಯಕ್ಷರಾದ ಕೆ. ಬಸಣ್ಣ ಹಾಗೂ ಎ ಐ ಎಮ್ ಎಸ್ ಎಸ್ ಮಹಿಳಾ ಸಂಘಟನೆಯ ಜಂಟಿ ಕಾರ್ಯದರ್ಶಿ ವಿದ್ಯಾವತಿ ಯವರು ಹಾಗೂ ಸದಸ್ಯರಾದ ಗ್ರಾಮದ ಶಾರದಮ್ಮ, ಶಿವಮ್ಮ, ಗೌರಮ್ಮ, ಲಕ್ಷ್ಮಿ, ಗೀತಾ, ಹನುಮಂತಮ್ಮ, ಮಾರಮ್ಮ, ಲಕ್ಷ್ಮಿ ಇನ್ನೂ ಹಲವಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.