ಕೋಲ ನಡೆಯುತ್ತಿದ್ದ ವೇಳೆ ಕಲ್ಲು ತೂರಾಟ

ತಡರಾತ್ರಿ ತೊಕ್ಕೊಟ್ಟಿನಲ್ಲಿ ನಡೆದ ಘಟನೆ: ಆರೋಪಿ ಸೆರೆ 

ಮಂಗಳೂರು, ಎ.೧೧- ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಸ್ವಾಮಿ ಕೊರಗಜ್ಜನ ಕೋಲ ನಡೆಯುತ್ತಿದ್ದ ವೇಳೆ ಜನರ ಗುಂಪಿನೆಡೆ ಕಲ್ಲು ತೂರಿದ ವ್ಯಕ್ತಿಯನ್ನು ಜನರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ. 

ಬಂಧಿತ ಆರೋಪಿಯನ್ನು ಉಳ್ಳಾಲದ ಮುಹಮ್ಮದ್ ಹಫೀಜ್ ಎಂದು ಗುರುತಿಸಲಾಗಿದೆ. ಆತ ನಶೆಯಲ್ಲಿ ಇದ್ದ ಎಂದು ಮೂಲಗಳು ತಿಳಿಸಿವೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಹಾಜರಿದ್ದವರು ಆತನನ್ನು ಪೊಲೀಸರಿಗೆ ಒಪ್ಪಿಸುವ ಮುನ್ನ ಥಳಿಸಿದ್ದರು ಎನ್ನುವ ಆರೋಪ ಕೂಡ ಇದೀಗ ಕೇಳಿಬಂದಿದೆ. ತೊಕ್ಕೊಟ್ಟು ಸ್ವಾಮಿ ಕೊರಗಜ್ಜ ಸೇವಾ ಸಮಿತಿಯು ಈ ಹಿಂದೆ ನಿಯಮಿತವಾಗಿ ವಾರ್ಷಿಕ ಕೋಲವನ್ನು ಆಯೋಜಿಸುತ್ತಿತ್ತು. ದೀರ್ಘ ಅಂತರದ ಬಳಿಕ ಈ ವರ್ಷ, ಏಪ್ರಿಲ್ 10 ರ ಶನಿವಾರ ಕೋಲ ನಡೆಸಿದ್ದರು. ಅನೇಕ ಮಂದಿ ಕೋಲದಲ್ಲಿ ಪಾಲ್ಗೊಂಡಿದ್ದರು. ಕೋಲದ ಬಳಿಕ ಅಗೆಲು ಪ್ರಸಾದವನ್ನು ವಿತರಿಸುತ್ತಿದ್ದಾಗ, ಹಫೀಜ್ ಹತ್ತಿರದ ಛಾವಣಿಯ ಮೇಲಿಂದ ಗುಂಪಿನ ಮೇಲೆ ಕಲ್ಲು ಎಸೆಯಲು ಪ್ರಾರಂಭಿಸಿದ್ದಾನೆ. ಉಳ್ಳಾಲ ಪೊಲೀಸ್‌ ಠಾಣೆಯ ವಾಹನದ ಮೇಲೂ ಒಂದು ಕಲ್ಲು ಬಿದ್ದಿದೆ. ಕೂಡಲೇ ಭಕ್ತರ ಗುಂಪೊಂದು ಆ ವ್ಯಕ್ತಿ ಇದ್ದ ಸ್ಥಳಕ್ಕೆ ಹೋಗಿ ಆತನನ್ನು ಕೆಳ ಕರೆತಂದು ಪೊಲೀಸರಿಗೆ ಒಪ್ಪಿಸಿದರು. ಕೆಲವರು ಇಲ್ಲಿ ಕೊರಗಜ್ಜನ ಕಟ್ಟೆ ನಿರ್ಮಾಣಕ್ಕೆ ವಿರೋಧಿಸುತ್ತಿದ್ದಾರೆ. ಈ ಜನರು ಮಾದಕ ವ್ಯಸನಕ್ಕೆ ಒಳಗಾದ ವ್ಯಕ್ತಿಗೆ ಹಣ ನೀಡಿ ಗುಂಪಿನ ಮೇಲೆ ಕಲ್ಲು ಎಸೆಯಲು ಹೇಳಿರುವ ಸಾಧ್ಯತೆಯಿದೆ ಎಂದು ಸ್ಥಳೀಯರು ಹೇಳಿದ್ದಾರೆ.