
ಕಲಬುರಗಿ:ಮಾ.18: ಕೋಲಿ, ಕಬ್ಬಲಿಗ ಸಮಾಜವನ್ನು ಎಸ್‍ಟಿ ಪಟ್ಟಿಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ಹೈದ್ರಾಬಾದ್ ಕರ್ನಾಟಕ ಕೋಲಿ ಸಮಾಜ ಕರ್ನಾಟಕ ಕೋಲಿ ಕಬ್ಬಲಿಗ ಸಂಘರ್ಷ ಸಮಿತಿಯಿಂದ ನಗರದ ಜಗತ್ ವೃತ್ತದಿಂದ ತಹಸಿಲ್ದಾರ್ ಕಚೇರಿಯವರಗೂ ಶನಿವಾರದಂದು ಉರುಳುಸೇವೆ ಚಳುವಳಿಯನ್ನು ಹಮ್ಮಿಕೊಳ್ಳಲಾಗಿತ್ತು.
ಕಳೆದ ಲೋಕಸಭಾ, ವಿಧಾನಸಭಾ ಹಾಗೂ ಉಪ ಚುನಾವಣೆಗಳ ಸಂದರ್ಭದಲ್ಲಿ ಬಿಜೆಪಿ ನಾಯಕರು ಕೋಲಿ ಸಮಾಜದ ಪರ್ಯಾಯ ಪದಗಳನ್ನು ಎಸ್‍ಟಿಗೆ ಸೇರಿಸುವ ಕುರಿತು ಬಹಿರಂಗ ಭರವಸೆಯನ್ನು ನೀಡಿದ್ದರು. ಆದಾಗ್ಯೂ, ಅಧಿಕಾರ ಮುಗಿಯುತ್ತಿದ್ದರೂ ಸಹ ಇನ್ನೂ ಬೇಡಿಕೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿ ಕೋಲಿ ಸಮಾಜದವರು ವಿವಿಧ ಹೋರಾಟಗಳನ್ನು ಮುಂದುವರೆಸಿದ್ದಾರೆ. ಹೀಗಾಗಿ ಆ ಹೋರಾಟದ ಭಾಗವಾಗಿ ಉರುಳುಸೇವೆಯನ್ನು ಮಾಡಿದರು.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಜಯ್ ಸಂಕಲ್ಪ ಯಾತ್ರೆಗೆ ಅಫಜಲಪುರಕ್ಕೆ ಬಂದಾಗ ಅವರ ವಿರುದ್ಧ ಕೋಲಿ, ಕಬ್ಬಲಿಗ ಎಸ್‍ಟಿ ಹೋರಾಟ ಸಮಿತಿಯ ಅಧ್ಯಕ್ಷ ಲಚ್ಚಪ್ಪ ಜಮಾದಾರ್ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದರಿಂದ ಬಂದ ದಾರಿಗೆ ಸುಂಕವಿಲ್ಲದೇ ಮೂರ್ತಿ ಅನಾವರಣ ಕೈಬಿಟ್ಟು ಯಡಿಯೂರಪ್ಪ ಅವರು ಆಳಂದ್ ಕಡೆಗೆ ನಿರ್ಗಮಿಸಿದರು. ಅದಕ್ಕಿಂತ ಮೊದಲು ಸಹ ನಗರದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮುತ್ತಿಗೆ ಹಾಕುವ ಚಳುವಳಿಯನ್ನೂ ಸಹ ಹಮ್ಮಿಕೊಳ್ಳಲಾಗಿತ್ತು.
ಈ ಎಲ್ಲದರ ಮಧ್ಯೆ, ಚುನಾವಣೆ ಸಮೀಪಿಸುತ್ತಿದ್ದು, ಚುನಾವಣಾ ಅಧಿಸೂಚನೆಯೊಳಗೆ ರಾಜ್ಯ ಬಿಜೆಪಿ ಸರ್ಕಾರವು ಕೋಲಿ ಸಮಾಜದ ಪರ್ಯಾಯ ಪದಗಳನ್ನು ಎಸ್‍ಟಿಗೆ ಸೇರಿಸಲು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಇದೇ ಮಾರ್ಚ್ 20ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಂಡಿದ್ದು, ಹೋರಾಟ ಪ್ರಖರಗೊಳ್ಳುವ ಸಾಧ್ಯತೆ ಇದೆ.
ನಿಂಗಪ್ಪ ದೇವಣಗಾಂವ್, ಸಿದ್ದು (ಗೌತಮ್) ಜಮಾದಾರ್, ದಿಗಂಬರ್ ಮಾಗಣಗೇರಿ, ಅಮೃತ್ ಡಿಗ್ಗಿ, ಸಂತೋಷ್ ಬೆಣ್ಣೂರ ಸೇರಿದಂತೆ ಹಲವರು ಪಾಲ್ಗೊಂಡರು.