ಕೋಲಿ ಸಮಾಜ ಎಸ್‍ಟಿಗೆ : ಬಿಜೆಪಿ ಸರ್ಕಾರದ ವಿರುದ್ಧ ಮಾ. 20ರಂದು ಬೃಹತ್ ರ್ಯಾಲಿ

ಕಲಬುರಗಿ,ಮಾ.4: ಕೋಲಿ ಸಮಾಜದ ಪರ್ಯಾಯ ಪದಗಳನ್ನು ಎಸ್‍ಟಿಗೆ ಸೇರಿಸುವುದಾಗಿ ಬಿಜೆಪಿ ನಾಯಕರು ನೀಡಿದ ಭರವಸೆ ಸಂಪೂರ್ಣ ಹುಸಿಯಾಗಿದೆ. ಇದನ್ನು ಖಂಡಿಸಿ ನಗರದಲ್ಲಿ ಮಾರ್ಚ್ 20ರಂದು ಸೋಮವಾರ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೋಲಿ, ಕಬ್ಬಲಿಗ, ಎಸ್‍ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ರಾಜನಾಥ್‍ಸಿಂಗ್, ಅಮಿತ್ ಶಾ ಹಾಗೂ ಸ್ವತ: ಪ್ರಧಾನಿ ನರೇಂದ್ರ ಮೋದಿ ಅವರೇ ಭರವಸೆ ನೀಡಿದ್ದು, ಅದೆಲ್ಲವೂ ಹುಸಿಯಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರದ ರಕ್ಷಣಾ ಸಚಿವ ರಾಜನಾಥಸಿಂಗ್ ಅವರು ಅಫಜಲಪುರದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ, ಕೋಲಿ ಸಮಾಜದ ಪರ್ಯಾಯ ಪದಗಳನ್ನು ಎಸ್‍ಟಿಗೆ ಸೇರಿಸುವುದಾಗಿ ಹೇಳಿದ್ದರು. ಸ್ವತ: ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ನೂತನ ವಿದ್ಯಾಲಯ ಮೈದಾನದಲ್ಲಿ ಈ ಕುರಿತು ಭರವಸೆ ಕೊಟ್ಟಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಸಹ ಹೇಳಿಕೆ ಕೊಟ್ಟಿದ್ದರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈಗಲೂ ಸಹ ಭರವಸೆ ನೀಡುತ್ತಿದ್ದಾರೆಯೇ ಹೊರತು ಅನುಷ್ಠಾನಕ್ಕೆ ಮಾತ್ರ ತರುತ್ತಿಲ್ಲ ಎಂದು ಅವರು ತೀವ್ರ ಆಕ್ರೋಶ ಹೊರಹಾಕಿದರು.
ಚುನಾವಣೆಯ ಸಂದರ್ಭದಲ್ಲಿ ಮಾತ್ರ ಕೋಲಿ ಸಮಾಜದ ಎಸ್‍ಟಿ ಸೇರ್ಪಡೆ ವಿಷಯ ಬಿಜೆಪಿ ನಾಯಕರಿಗೆ ನೆನಪಿಗೆ ಬರುತ್ತಿದೆ. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರಗಳಿದ್ದರೂ ಸಹ ಮತ್ತೆ ಚುನಾವಣೆ ಬಂದರೂ ಸಹ ಬೇಡಿಕೆಗಳನ್ನು ಸಹ ಈಡೇರಿಸಿಲ್ಲ. ಹೀಗಾಗಿ ಮತ್ತೆ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗಿದೆ ಎಂದು ಅವರು ಕಿಡಿಕಾರಿದರು.
ಲೋಕಸಭಾ, ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಹಾಗೂ ಚಿಂಚೋಳಿ, ಬಸವಕಲ್ಯಾಣ, ಸಿಂದಗಿ, ಹಾವೇರಿ ಮುಂತಾದ ಉಪ ಚುನಾವಣೆಗಳಲ್ಲಿಯೂ ಸಹ ಕೋಲಿ ಸಮಾಜದ ಪರ್ಯಾಯ ಪದಗಳನ್ನು ಎಸ್‍ಟಿಗೆ ಸೇರಿಸುವ ಕುರಿತು ಭರವಸೆ ನೀಡಿದ್ದರು. ಈಗಲೂ ಸಹ ಅದೇ ಭರವಸೆಗಳನ್ನು ಕೊಡುತ್ತಿದ್ದು, ಇನ್ನು ಮುಂದೆ ಭರವಸೆಗಳನ್ನು ನಂಬಲಾಗದು ಎಂದು ಅವರು ಎಚ್ಚರಿಸಿದರು.
ಈಗಾಗಲೇ ಕುಲಶಾಸ್ತ್ರೀಯ ಅಧ್ಯಯನದ ವರದಿ ಹೋಗಿದೆ. ತಕ್ಷಣವೇ ಕೇಂದ್ರ ಸರ್ಕಾರವು ಕೋಲಿ ಸಮಾಜದ ಪರ್ಯಾಯ ಪದಗಳನ್ನು ಎಸ್‍ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದ ಅವರು, ಬೇಡಿಕೆಯನ್ನು ಈಡೇರಿಸಲು ಆಗ್ರಹಿಸಿ ಮಾರ್ಚ್ 20ರಂದು ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಸವರಾಜ್ ಚಿನಮಳ್ಳಿ, ಪಿಂಟು ಜಮಾದಾರ್, ಭೀಮಶಾ ಖನ್ನಾ, ಶಂಕರ್ ಕಟ್ಟಿಸಂಗಾವಿ, ರಾಮಲಿಂಗ್ ನಾಟೀಕಾರ್, ಮಲ್ಲಿಕಾರ್ಜುನ್ ಗುಡುಬಾ, ಶಿವು ಧನಿ, ಶಿವಕುಮಾರ್ ಫಿರೋಜಾಬಾದ್, ಶರಣು ಜಮಾದಾರ್, ವೈಜನಾಥ್ ಜಮಾದಾರ್ ಕಟ್ಟೊಳ್ಳಿ, ಗುರು ಕರಾಟೆ, ನಾಗೇಂದ್ರಪ್ಪ ನಿಂಗಮಪಲ್ಲಿ, ರಾಮಲಿಂಗ್ ಬಾನರ್, ಶಿವು ತಳವಾರ್, ಸತೀಶ್ ಜಮಾದಾರ್, ಅಂಬಾರಾಯ್ ಜವಳಗಾ, ರೇವಣಸಿದ್ದಪ್ಪ ಮುಕರಂಬಿ, ವಿಜಯಕುಮಾರ್ ಸಣ್ಣೂರ್, ರೇವಣಸಿದ್ದಪ್ಪ ಕಮ್ಮನಮನಿ ಮುಂತಾದವರು ಉಪಸ್ಥಿತರಿದ್ದರು.