ಕೋಲಿ ಸಮಾಜದ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನಾ ರ್ಯಾಲಿ: ಜ. 3ರಂದು ಪೂರ್ವಭಾವಿ ಸಭೆ

ಕಲಬುರಗಿ:ಡಿ.27: ಜಿಲ್ಲೆಯಲ್ಲಿ ಕೋಲಿ ಸಮಾಜದ ಮೇಲೆ ನಿರಂತರವಾಗಿ ದೌರ್ಜನ್ಯ, ಅತ್ಯಾಚಾರ, ಕೊಲೆಗಳು ನಡೆಯುತ್ತಿರುವುದನ್ನು ಖಂಡಿಸಿ 2024ರ ಜನವರಿ ಕೊನೆಯ ವಾರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಿದ್ದು, ಆ ನಿಮಿತ್ಯ ಜನವರಿ 3ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕೋಲಿ ಭವನದಲ್ಲಿ ಸಮಾಜದ ಮುಖಂಡರ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಜಿಲ್ಲಾ ಕೋಲಿ ಕಬ್ಬಲಿಗ- ಸಮನ್ವಯ ಸಮಿತಿಯ ಹಿರಿಯ ಮುಖಂಡ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಅವ್ವಣ್ಣ ಮ್ಯಾಕೇರಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಮೇಲಿನ ದೌರ್ಜನ್ಯ, ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳಲ್ಲಿ ಪೋಲಿಸರು ಸಮರ್ಪಕವಾಗಿ ತನಿಖೆ ಮಾಡುತ್ತಿಲ್ಲ. ಅಲ್ಲದೇ ದೂರು ಸಹ ದಾಖಲಿಸಿಕೊಳ್ಳದೇ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಗರದಲ್ಲಿ ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಅವರ ಮನೆಯ ಆವರಣದಲ್ಲಿ ದೇವಪ್ಪ ನಾಟೀಕಾರ್ ಅವರ ಅಸ್ವಾಭಾವಿಕ ಸಾವು, ತಾಲ್ಲೂಕಿನ ತಾಡತೆಗನೂರ್ ಗ್ರಾಮದ ಯುವಕ ಶರಣಪ್ಪ ಜಮಾದಾರ್ ಕೊಲೆ, ಕಾಳಗಿ ತಾಲ್ಲೂಕಿನ ಕೋಡ್ಲಿ ಗ್ರಾಮದ ಅಮರ್ ಜಮಾದಾರ್ ಕೊಲೆ, ಚಿತ್ತಾಪುರ ತಾಲ್ಲೂಕಿನ ಕಲಗುರ್ತಿ ಗ್ರಾಮದ ದೇವಾನಂದ್‍ನ ಅಸ್ವಾಭಾವಿಕ ಸಾವು, ಅಫಜಲಪುರ ತಾಲ್ಲೂಕಿನ ಚಿಂಚೋಳಿ ಗ್ರಾಮದ ಯುವಕ ಶಿವಶರಣ್ ಜಮಾದಾರ್ ಕೊಲೆ, ಚಿತ್ತಾಪುರ ತಾಲ್ಲೂಕಿನ ಕಲಗುರ್ತಿ ಗ್ರಾಮದ ಯುವತಿ ಅಪಹರಣ, ಜೇವರ್ಗಿ ತಾಲ್ಲೂಕಿನ ಯಾತನೂರ್ ಗ್ರಾಮದ ಬಾಲಕಿ ಮೇಲೆ ಅತ್ಯಾಚಾರ, ಅಫಜಲಪುರ ತಾಲ್ಲೂಕಿನ ಚಿಣಮಗೇರಾದ ಬಾಲಕಿ ಆಕಸ್ಮಿಕ ಸಾವು, ಜೇವರ್ಗಿ ತಾಲ್ಲೂಕಿನ ನೆಲೋಗಿ ಗ್ರಾಮದ ಕೋಲಿ ಸಮಾಜದ ಬಡ ಕೂಲಿ ಕಾರ್ಮಿಕ ಸಿದ್ದಪ್ಪ ಅವರಳ್ಳಿ ಅವರಿಗೆ ವಂಚನೆ ಸೇರಿದಂತೆ ಹಲವಾರು ದೌರ್ಜನ್ಯಗಳು ಸಮಾಜದ ಮೇಲೆ ಆಗಿವೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.
ಪ್ರತಿಯೊಂದು ಪ್ರಕರಣದಲ್ಲಿಯೂ ಸಹ ಪೋಲಿಸರು ತನಿಖೆ ಕೈಗೊಂಡಿಲ್ಲ. ದೂರುಗಳನ್ನು ಸಹ ಸ್ವೀಕರಿಸಿಲ್ಲ. ಅನೇಕ ಪ್ರಕರಣಗಳಲ್ಲಿ ನ್ಯಾಯಕ್ಕಾಗಿ ಹೋರಾಟಗಳನ್ನು ಮಾಡುತ್ತಿದ್ದೇವೆ. ಆದಾಗ್ಯೂ, ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೊಟ್ಟ ಭರವಸೆ ಹುಸಿಯಾಗಿದೆ. ಪ್ರಕರಣದ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸುತ್ತಿಲ್ಲ. ಹೀಗಾಗಿ ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡಲು ಹೋರಾಟವೊಂದೇ ಪರಿಹಾರವಾಗಿದೆ ಎಂದು ಅವರು ಹೇಳಿದರು.
ಸಮಾಜದ ಮೇಲಿನ ಎಲ್ಲ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳಿಗೆ ನಿದರ್ಶನೀಯ ಶಿಕ್ಷೆ ನೀಡುವಂತೆ ಒತ್ತಾಯಿಸಿ 2024ರ ಜನವರಿ ಕೊನೆಯ ವಾರದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಈ ಸಂಬಂಧ ಜನವರಿ 3ರಂದು ಪೂರ್ವಭಾವಿ ಸಭೆ ಕರೆದು ಹೋರಾಟದ ಕುರಿತು ರೂಪುರೇಷೆ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಸವರಾಜ್ ಬೂದಿಹಾಳ್, ಬಸವರಾಜ್ ಹರವಾಳ್, ರಮೇಶ್ ನಾಟೀಕಾರ್, ಅಂಬು ಡಿಗ್ಗಿ, ಗುಂಡು ಐನಾಪೂರ್, ಸಂತೋಷ್ ತಳವಾರ್, ಪ್ರೇಮ್ ಕೋಲಿ, ರವಿ ಡೊಂಗರಗಾಂವ್, ಸಾಯಬಣ್ಣ ಜಾಲಗಾರ್, ಬೋಗೇಶ್ ಜಮಾದಾರ್ ಮುಂತಾದವರು ಉಪಸ್ಥಿತರಿದ್ದರು.