ಕೋಲಿ ಸಮಾಜದ ಪೌರಕಾರ್ಮಿಕ ಸಾವು; ಜಿಲ್ಲಾಸ್ಪತ್ರೆ ಮುಂದೆ ದಿಢೀರ್ ಪ್ರತಿಭಟನೆ

ಯಾದಗಿರಿ:ನ.18: ನಗರಸಭೆ ದಿವ್ಯ ನಿರ್ಲಕ್ಷ್ಯದಿಂದ ಪೌರಕಾರ್ಮಿಕ ವಿದ್ಯುತ್ ತಗುಲಿ ಸಾವನ್ನಪ್ಪಿದ ಘಟನೆ ಖಂಡಿಸಿ ಕೋಲಿ ಸಮಾಜದಿಂದ ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ಬುಧವಾರ ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು
ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಘಟನೆ ಕುರಿತು ನಗರಸಭೆ ದಿವ್ಯ ನಿರ್ಲಕ್ಷ್ಯವನ್ನು ಖಂಡಿಸಿದರು.
ವಾರ್ಡ ನಂ. 11 ರ ಕೊಟಗಾರವಾಡದಲ್ಲಿ ನಗರಸಭೆಯಿಂದ 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ ನಡೆಯುತ್ತಿತ್ತು. ಈ ಕಾಮಗಾರಿ ವೇಳೆ ಯಾವುದೇ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳದೇ ಗುತ್ತಿಗೆದಾರನ ನಿರ್ಲಕ್ಷ್ಯದಿಂದಾಗಿ ಕೋಲಿ ಸಮಾಜದ ರಾಮಣ್ಣ ತಂ. ಭೀಮಶೆಪ್ಪ ದೋರನಳ್ಳಿ ಸಾ|| ಕೊಯಿಲೂರು ಎಂಬ ಒಂದು ಜೀವ ಬಲಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ನಗರಸಭೆ ಅಧ್ಯಕ್ಷ ಹಾಗೂ ಪೌರಾಯುಕ್ತರು ಮನವೊಲಿಸಲು ಯತ್ನಿಸಿದಾಗ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನೆಕಾರರು ಪೋಸ್ಟ್ ಮಾರ್ಟಂ ಮಾಡಲು ಬಿಡುವುದಿಲ್ಲ ಕ್ರಮ ಕೈಗೊಳ್ಳದೇ ಇದಲ್ಲಿ ಶವವನ್ನು ನಗರಸಭೆ ಮುಂದೆ ತಂದು ಪ್ರತಿಭಟನೆ ಮುಂದುವರೆಸುವುದಾಗಿ ಪಟ್ಟುಹಿಡಿದರು.
ಆಗ ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು, ಸೂಕ್ತ ಪರಿಹಾರ ಸಿಗಬೇಕು, ಸಂಬಂಧಿಸಿದ ಕುಟುಂಬಸ್ಥರಿಗೆ ನೌಕರಿ ಕೊಡಬೇಕು, ಮುಂದೆ ಇಂತಹ ನಿರ್ಲಕ್ಷ್ಯ ಮಾಡಬಾರದು ಎಂದು ಆಗ್ರಹಿಸಿದಾಗ ಈ ಎಲ್ಲ ಬೇಡಿಕೆ ಈಡೇರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಎಸ್.ಆರ್. ಕನ್ಸಟ್ರಕ್ಷನ್ ಮಾಲೀಕ ಶ್ರೀಧರ, ಶ್ರೈಶೈಲ ಸುಪರವೈಜರ್, ವಸಂತ, ನಗರಸಭೆ ಜೆಇ ನಿಂಗಾರೆಡ್ಡಿ, ನಗರಸಭೆ ಪೌರಾಯುಕ್ತ, ಜೆಸ್ಕಾಂ ಲೈನ್ ಮ್ಯಾನ್ ಶರಣು ಇವರ ವಿರುದ್ಧ ಪ್ರಕರಣ ನಗರ ಠಾಣೆಯಲ್ಲಿ ದಾಖಲಿಸಲಾಯಿತು. ಆರೋಪಿತರ ವಿರುದ್ಧ 287 ಮತ್ತು 304(ಎ) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಕೇವಲ ಭರವಸೆ ನೀಡಿದರೆ ಸಾಲದು ತಕ್ಷಣ ಕಾರ್ಯರೂಪಕ್ಕೆ ತರಬೇಕು ಇಲ್ಲವಾದಲ್ಲಿ ಮತ್ತೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಉಮೇಶ ಮುದ್ನಾಳ ಎಚ್ಚರಿಕೆ ನೀಡಿದರು.