ಕೋಲಿ ಸಮಾಜಕ್ಕೆ ಬಿಜೆಪಿಯಿಂದ ಮೋಸ, ಖರ್ಗೆ ಕುಟುಂಬದಿಂದಲ್ಲ; ಲಚ್ಚಪ್ಪ ಎಸ್. ಜಮಾದಾರ

ಕಲಬುರಗಿ,ಏ.24-ಕೋಲಿ ಸಮಾಜಕ್ಕೆ ಬಿಜೆಪಿ ಸರ್ಕಾರದಿಂದ ಮೋಸವಾಗಿದೆ ವಿನಹ ಡಾ.ಮಲ್ಲಿಕಾರ್ಜುನ ಖರ್ಗೆ ಕುಟುಂಬದಿಂದಲ್ಲ ಎಂದು ಕರ್ನಾಟಕ ರಾಜ್ಯ ಕೋಲಿ-ಕಬ್ಬಲಿಗ ಹೋರಾಟ ಸಮಿತಿ ರಾಜ್ಯಾದ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಲಚ್ಚಪ್ಪ ಎಸ್.ಜಮಾದಾರ ಹೇಳಿದರು.
ಕೋಲಿ ಸಮಾಜಕ್ಕೆ ಖರ್ಗೆ ಕುಟುಂಬ ಮೋಸ ಮಾಡಿದೆ ಎಂಬ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟೀಕಾರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸುಳ್ಳು ಭರವಸೆ ನೀಡಿ ನಮ್ಮ ಮತಗಳನ್ನು ಪಡೆದಿರುವುದು ಬಿ.ಜೆ.ಪಿ ಪಕ್ಷ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿಗಳಾದ ಯಡಿಯ್ಯುರಪ್ಪ ಮತ್ತು ಬಸವರಾಜ ಬೊಮ್ಮಾಯಿ. ಕೋಲಿ ಸಮಾಜಕ್ಕೆ ಎಸ್.ಟಿ ಮಾಡಿಕೊಡುತ್ತೇವೆಂದು ಪ್ರಚಾರ ಭಾಷಣ ಮಾಡಿ, ನಮ್ಮ ಮತಗಳನ್ನು ಪಡೆದು ಮೊಸ ಮಾಡಿದ್ದಾರೆ ಹೊರತು ಡಾ.ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರು ಅಲ್ಲ. ಖರ್ಗೆ ಅವರು ಸುಳ್ಳು ಭರವಸೆ ನೀಡಿ ಯಾವತ್ತು ಮತ ಕೇಳಿ ಕೋಲಿ ಸಮಾಜಕ್ಕೆ ಮೋಸ ಮಾಡಿಲ್ಲವೆಂದು ಜಮಾದಾರ ಅವರು ನಾಟೀಕಾರಗೆ ತಿರುಗೇಟು ನೀಡಿದ್ದಾರೆ.
ಕೋಲಿ ಸಮಾಜವನ್ನು ಎಸ್ಟಿ ಸೇರ್ಪಡೆ ಮಾಡಲು ಮೊದಲ ಪ್ರಸ್ತಾವನೆಯನ್ನು ಕಳುಹಿಸಿದ್ದೇ ಕಾಂಗ್ರೆಸ್ ಸರ್ಕಾರ. ಜೆಡಿಎಸ್‍ನ ದೇವೆಗೌಡರು ಪ್ರಧಾನಿಯಾಗಿದ್ದಾಗ ಅವಕಾಶವಿದ್ದರೂ ಮಾಡಲಿಲ್ಲ. 10 ವರ್ಷದಲ್ಲಿ ಮೋದಿ ಸರ್ಕಾರಕ್ಕೂ ಎಸ್ಟಿಗೆ ಸೇರಿಸಲು ಆಗಲಿಲ್ಲ. 2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಇದೇ ನಾಟೀಕಾರ ಅವರು ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿದ ಕಾರ್ಯಸಾಧನೆಗಳ ಬಗ್ಗೆ ಹೊಗಳಿ ಭಾಷಣ ಮಾಡಿದ್ದು ಮರೆತು ಬಿಜೆಪಿ ಜೊತೆಗೆ ಸೇರಿದ ಮೆಲೆ ಖರ್ಗೆ ಕುಟುಂಬದ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಎಂಎಲ್ಸಿ ಎನ್.ರವಿಕುಮಾರ್ ಎಸ್ಟಿ ಸೇರ್ಪಡೆಯ ಭರವಸೆ ನೀಡಿ ಈಗ ನಾಪತ್ತೆಯಾಗಿದ್ದಾರೆ. ಕೋಲಿ ಸಮಾಜದ ಎಸ್ಟಿ ಸೇರ್ಪಡೆಯ ಎಲ್ಲಾ ಪ್ರಯತ್ನಗಳ ಹಿಂದೆ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಮತ್ತು ಅವರ ಸುಪುತ್ರ ಸಚಿವ ಪ್ರಿಯಾಂಕ ಖರ್ಗೆ ಅವರು ಈ ಹಿಂದೆಯೂ ಇದ್ದರು, ಮುಂದೆಯೂ ಇರ್ತಾರೆ ಎಂದು ಜಮಾದಾರ ನಾಟೀಕಾರ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದಾರೆ.