ಕೋಲಾರ ಲೋಕಸಭಾ ಕ್ಷೇತ್ರದಿಂದ ಕೆಎಚ್‌ಎಂ ಸ್ಪರ್ಧೆಗೆ ಆಗ್ರಹ

ಕೋಲಾರ,ನ,೭- ಕೋಲಾರ ಲೋಕಸಭಾ ಕ್ಷೇತ್ರ ಕೆ.ಎಚ್.ಮುನಿಯಪ್ಪ ಅವರು ಸತತ ೭ ಬಾರಿ ಸಂಸದರಾಗಿ ಆಯ್ಕೆಯಾದ ಅವರ ಕರ್ಮಭೂಮಿಯಾಗಿದ್ದು, ೨೦೨೪ ರ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ಕೆ.ಎಚ್.ಮುನಿಯಪ್ಪ ಮಾತ್ರ ಸಮರ್ಥ ಅಭ್ಯರ್ಥಿಯಾಗಿದ್ದು, ಪಕ್ಷ ಅವರಿಗೆ ಟಿಕೆಟ್ ನೀಡುವ ಮೂಲಕ ಜಿಲ್ಲೆಯಲ್ಲಿ ಪಕ್ಷಕ್ಕೆ ಸಮರ್ಥ ನಾಯಕತ್ವದ ಕೊರತೆ ನೀಗಿಸುವಂತೆ ಕಾಂಗ್ರೆಸ್ ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಎಸ್ಟಿಘಟಕದ ಅಧ್ಯಕ್ಷ ನಾಗರಾಜ್ ಜಂಟಿ ಹೇಳಿಕೆಯಲ್ಲಿ ಪಕ್ಷದ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕಳೆದ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ದ್ರೋಹಿಗಳ ಚಿತಾವಣೆಯಿಂದ ಸೋಲಬೇಕಾಯಿತು. ಆದರೂ ಪಕ್ಷಕ್ಕೆ ದ್ರೋಹವೆಸಗದೇ ನಿಷ್ಠೆಯಿಂದ ಕೆಲಸ ಮಾಡಿ ವಿಧಾನಸಭಾ ಚುನವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ, ಅವರೇ ಕೋಲಾರದಿಂದ ಕಣಕ್ಕಿಳಿಯಬೇಕು ಎಂಬುದು ಜಿಲ್ಲೆಯ ಪ್ರತಿಯೊಬ್ಬ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರ ಆಗ್ರಹವಾಗಿದೆ. ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಅವರೇ ಬರಬೇಕೆಂದು ಲೋಕಸಭಾ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಜ್ಯಾತತೀತವಾಗಿ, ಪಕ್ಷತೀತವಾಗಿ ಹಾಗೂ ಧರ್ಮತೀತವಾಗಿ ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಅಭಿಮಾನಿಗಳು ಗುಂಪು ಗುಂಪಾಗಿ ಅವರ ನಿವಾಸಕ್ಕೆ ತೆರಳಿ ಒತ್ತಾಯಿಸುತ್ತಿದ್ದಾರೆಂದು ತಿಳಿಸಿದ್ದಾರೆ.
ನಿಷ್ಟಾವಂತ ಕಾರ್ಯಕರ್ತರು,ಜನತೆ ‘೨೦೧೯ರ ಚುನಾವಣೆಯಲ್ಲಿ ನಿಮ್ಮನ್ನು ಮೋಸದಿಂದ ಸೋಲಿಸಿದರು ಆದರೆ ೨೦೨೪ ರ ಲೋಕಸಭಾ ಚುನಾವಣೆಗೆ ನೀವೇ ನಿಲ್ಲಬೇಕು, ನೀವು ಬಿಟ್ಟರೆ ಬೇರೆ ಯಾರೇ ಕಾಂಗ್ರೆಸ್ ಪಕ್ಷದಿಂದ ನಿಂತರು ಸೋಲುತ್ತಾರೆ’ ಎಂದು ಹೇಳುತ್ತಿದ್ದು, ಈಗ ನಮಗೆ ನೀವೇ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕೆಂದು ತಂಡೋಪತಂಡವಾಗಿ ಬಂದು ಒತ್ತಡ ಹೇರುತ್ತಿದ್ದಾರೆ..ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಮನವಿ ಮಾಡುತ್ತಿರುವ ಪಕ್ಷದ ಮುಖಂಡರು ಕಾರ್ಯಕರ್ತರ ಮನವಿಗೆ ಓಗೊಟ್ಟಿರುವ ಕೆ.ಎಚ್.ಮುನಿಯಪ್ಪ ಅವರ, ‘ಕೋಲಾರ ನನ್ನ ಕರ್ಮ ಭೂಮಿ, ನಾನೀಗ ಹೈಕಮಾಂಡ್ ಅಣತಿಯಂತೆ ನಾನು ಶಾಸಕನಾಗಿ ಸಚಿವನಾಗಿದ್ದೇನೆ, ನನಗೂ ಕೋಲಾರ ಲೋಕಸಭಗೆ ಸ್ಪರ್ಧಿಸಲು ಇಚ್ಛೆಯಿದ್ದು ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿರುವುದಾಗಿ ಹೇಳುವ ಮೂಲಕ ಇಲ್ಲಿಂದ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದರು.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸತತ ಏಳು ಬಾರಿ ಗೆದ್ದ ಕೆ.ಎಚ್.ಮುನಿಯಪ್ಪ ಯುಪಿಎ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ರೈಲ್ವೆ ರಾಜ್ಯ ಖಾತೆ, ಹೆದ್ದಾರಿ, ಮತ್ತು ಸಣ್ಣ ಕೈಗಾರಿಕಾ ಖಾತೆ ಸಚಿವರಾಗಿ,ಪಕ್ಷದ ಹೈಕಾಮಂಡ್‌ನಲ್ಲಿ ಒಬ್ಬರಾಗಿ, ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ತಮ್ಮದೇ ಅದ ಕೊಡುಗೆ ನೀಡಿದ್ದಾರೆ.ಜಿಲ್ಲೆಯಲ್ಲಿ ಸಾವಿರಾರು ಕಾರ್ಯಕರ್ತರನ್ನು ಬೆಳೆಸಿ ಹತ್ತಾರು ಶಾಸಕರನ್ನೂ ಅವರ ಕೃಪಾಶೀರ್ವಾದದಿಂದ ಗೆಲ್ಲಿಸಿದ್ದಾರೆ, ಗ್ರಾಮ ಪಂಚಾಯತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಎಸ್‌ಎಸ್‌ಎನ್ ಪಿಎಲ್‌ಡಿ ಬ್ಯಾಂಕ್, ಡಿಸಿಸಿ ಬ್ಯಾಂಕ್, ನಗರಸಭೆ ಮುಂತಾದ ಸ್ಥಳೀಯ ಸಂಸ್ಥೆಗಳು ಮತ್ತು ಸಹಕಾರ ಸಂಸ್ಥೆಗಳಲ್ಲೂ ಪಕ್ಷದ ಬೆಂಬಲಿಗರ ಆಯ್ಕೆಗೆ ಬದ್ದತೆಯಿಂದ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಆದರೆ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಇಲ್ಲದೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ನೇರ ಸ್ಪರ್ಧೆಯಾಗಿದ್ದರಿಂದ, ಪಕ್ಷದ್ರೋಹಿಗಳ ಚಿತವಾಣೆಯಿಂದ, ಅವರೇ ಬೆಳೆಸಿದವರು, ಅವರ ನೆರಳಲ್ಲಿ ಆಶ್ರಯ ಪಡೆದವರು ಬೆನ್ನಿಗೆ ಚೂರಿ ಹಾಕಿ ಬಿಜೆಪಿ ಬೆಂಬಲಿಸಿದ್ದರಿಂದ ಐದು ಲಕ್ಷ ಮತ ಪಡೆದರು ಸೋಲಬೇಕಾಯಿತು.ಆದರೂ ಪಕ್ಷ ದ್ರೋಹ ಮಾಡದೇ ಅಂದಿನ ವಿಧಾನಸಭಾ ಚುನಾವಣೆಯಲ್ಲಿ ಅವಳಿ ಜಿಲ್ಲೆಯಿಂದ ೮ ಶಾಸಕರ ಆಯ್ಕೆಗೆ ಶ್ರಮಿಸಿದ್ದಾರೆ, ಕೆಲವರ ಸ್ವಾರ್ಥ ರಾಜಕಾರಣದಿಂದ ೧೯೯೪ರ ವಿಧಾನಸಭಾ ಚುನಾವಣೆಯಲ್ಲಿ ಅಂದಿನ ಅವಿಭಾಜ್ಯ ಕೋಲಾರ ಜಿಲ್ಲೆಯ ೧೧ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಸೋತಿದ್ದನ್ನು ನಾವು ಜ್ಞಾಪಿಸಿಕೊಳ್ಳ ಬೇಕಾಗುತ್ತದೆ ಹಾಗೂ ಅದರಿಂದ ಪಾಠ ಸಹ ಕಲಿಯಬೇಕಾಗುತ್ತದೆ. ಅಂದಿನಿಂದ ಇಂದಿನವರೆಗೂ ಈ ಜಿಲ್ಲೆಗಳಲ್ಲಿ ಪಕ್ಷವನ್ನ ಸದೃಢವಾಗಿ ಕಟ್ಟಿ ಬೆಳೆಸಿ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತವರು ಕೆಎಚ್ ಮುನಿಯಪ್ಪ ಓರ್ವ ಪ್ರಶ್ನಾತೀತ ನಾಯಕರು ಎಂದು ಪುನರುಚ್ಚರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಬಂದಿದ್ದರಿಂದ ಪಕ್ಷದ ಶಿಸ್ತಿನಾ ಸಿಪಾಯಿಯಾದ ಕೆ ಹೆಚ್ ಮುನಿಯಪ್ಪ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರೆ ೨೫ ಸ್ಥಾನ ಸುಲಭವಾಗಿ ಗೆಲ್ಲಬಹುದೆಂದು ಎಂಬ ಪಕ್ಷದ ಲೆಕ್ಕಾಚಾರಕ್ಕೆ ತಲೆ ಭಾಗಿ ಹೈಕಮಾಂಡ್ ಒತ್ತಡಕ್ಕೆ ಮಣಿದು ದೇವನಹಳ್ಳಿಯಿಂದ ಕಣಕ್ಕಿಳಿದು ಜಯಗಳಿಸಿ ಸಚಿವರೂ ಆಗಿದ್ದಾರೆ. ಆದರೂ ಎದೆಗುಂದದೆ, ಕಾರ್ಯಕರ್ತರ ಕಷ್ಟಗಳಿಗೆ ಸ್ಪಂದಿಸುತ್ತ ಪಕ್ಷ ಸಂಘಟನೆ ಮಾಡುತ್ತ ಎಐಸಿಸಿ ಕರೆ ಕೊಟ್ಟ ಎಲ್ಲ ಪ್ರತಿಭಟನೆ, ಜಾಥಾ, ಮೇಕೆದಾಟು ಪಾದಯಾತ್ರೆ, ಭಾರತ್ ಜೋಡೋ ಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕಾರ್ಯಕರ್ತರನ್ನು ಸಂಘಟಿಸಿ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಲು ಶ್ರಮಿಸಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಕೆ.ಎಚ್.ಮುನಿಯಪ್ಪ ಅವರಿಗೆ ಪರ್ಯಾಯ ನಾಯಕತ್ವ ಇಲ್ಲ, ಏಕೆಂದರೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಪಕ್ಷದ ಮುಖಂಡರು ಯಾರನ್ನೂ ಬೆಳೆಸಲಿಲ್ಲ, ಅರ್ಹತೆ ಇದ್ದವರನ್ನೂ ಮೇಲೆ ಬರಲು ಅವಕಾಶ ನೀಡದೇ ತುಳಿದ ಪ್ರಸಂಗವಿದೆ. ಸತತ ೭ ಬಾರಿ ಕೋಲಾರ ಕ್ಷೇತ್ರದಲ್ಲಿ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಿದ ಕೆ.ಎಚ್.ಮುನಿಯಪ್ಪ ಅವರಿಗೆ ಈ ಬಾರಿ ಲೋಕಸಭಾ ಟಿಕೆಟ್ ನೀಡುವ ಮೂಲಕ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಡಿಪಾಯವನ್ನು ಮತ್ತಷ್ಟು ಭದ್ರಪಡಿಸಲು ಪಕ್ಷದ ಹೈಕಮಾಂಡ್ ಮುಂದಾಗಬೇಕು ಎಂದು ಜಯದೇವ್ ಹಾಗೂ ನಾಗರಾಜ್ ಮನವಿ ಮಾಡಿದ್ದಾರೆ.