ಕೋಲಾರ ತಾಲೂಕು ಪಂಚಾಯತಿ ಮಡಿಲಿಗೆ ರಾಜ್ಯ ಮಟ್ಟದ ೫ ಪುರಸ್ಕಾರ

ಕೋಲಾರ,ಮಾ,೨೮- ಕೋಲಾರ ತಾಲ್ಲೂಕು ಪಂಚಾಯಿತಿಗೆ ಅಮೃತ ಸರೋವರ ಅನುಷ್ಠಾನ ವಿಭಾಗ, ಉತ್ತಮ ರೇಷ್ಮೆ ಸ್ನೇಹಿ ವಿಭಾಗ, ಎರಡು ಗಾಂಧಿ ಗ್ರಾಮ ಪುರಸ್ಕಾರ, ಉತ್ತಮ ಅಮೃತ ಸರೋವರ ಅನುಷ್ಠಾನ ಗ್ರಾ.ಪಂ ಸೇರಿದಂತೆ ಒಟ್ಟು ಐದು ಪುರಸ್ಕಾರಗಳು ಲಭಿಸಿದ್ದು, ಇದಕ್ಕೆ ಜಿಪಂ ಸಿಇಒ ಯುಕೇಶ್‌ಕುಮಾರ್ ಅವರ ಪ್ರೋತ್ಸಾಹ ಹಾಗೂ ಇಲಾಖೆಯ ಸಿಬ್ಬಂದಿಯ ಪ್ರಯತ್ನ ಕಾರಣವಾಗಿದೆ ಎಂದು ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಮುನಿಯಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ವತಿಯಿಂದ ನಡೆದ ೨೦೨೨-೨೩ ನೇ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ರಾಜ್ಯ ಕಂದಾಯ ಇಲಾಖಾ ಸಚಿವರಾದ ಆರ್. ಅಶೋಕ್ ಹಾಗೂ ಸಚಿವ ಕೋಟಾ ಶ್ರೀನಿವಾಸ ಮೂರ್ತಿ ಅವರು ೫ ವಿಭಾಗಗಳಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ವಿತರಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಕೆಲಸ ಮಾಡಲು ಪ್ರೋತ್ಸಾಹ ಸಿಕ್ಕಂತಾಗಿದೆ ಎಂದು ತಿಳಿಸಿದ್ದಾರೆ.
ಅತ್ಯುತ್ತಮ ತಾಲೂಕು ಅಮೃತ ಸರೋವರ ಅನುಷ್ಠಾನ ವಿಭಾಗ, ಉತ್ತಮ ರೇಷ್ಮೆ ಸ್ನೇಹ ವಿಭಾಗ, ಎರಡು ಗಾಂಧಿ ಗ್ರಾಮ ಪುರಸ್ಕಾರ, ಉತ್ತಮ ಅಮೃತ ಸರೋವರ ಅನುಷ್ಠಾನ ಗ್ರಾಮ ಪಂಚಾಯತಿ (ಮದನಹಳ್ಳಿ ಗ್ರಾ.ಪಂ) ವಿಭಾಗದಲ್ಲಿ ಪ್ರಶಸ್ತಿಗಳನ್ನು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದು, ಪಡೆದುಕೊಂಡಿದ್ದಾರೆ.
ತಾಲೂಕಿನಾದ್ಯಂತ ಅಮೃತ ಸರೋವರ ಅಭಿಯಾನದಡಿ ೨೪ ಕೆರೆಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ್ದು, ಸಮಗ್ರ ಕೆರೆ ಅಭಿವೃದ್ಧಿ ಸೇರಿದಂತೆ ಜಲ ಸಂರಕ್ಷಣೆ ಕಾರ್ಯಕ್ರಮಗಳಲ್ಲಿ ಸದಾಕಾಲವೂ ತಾಲ್ಲೂಕು ಮುಂದಿನ ಸಾಲಿನಲ್ಲಿ ನಿಂತಿದೆ. ಈಗಾಗಲೇ ಉತ್ತಮ ಅಮೃತ ಸರೋವರ ಅನುಷ್ಠಾನದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದಿದ್ದ ಮದನಹಳ್ಳಿ ಜಿಂಕೆಗಳ ಕೆರೆಗೆ ಕೇಂದ್ರ ಸಚಿವ ಪಗ್ಗನ್ ಸಿಂಗ್ ಇತ್ತೀಚೆಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಕೋಲಾರ ತಾಲೂಕಿನಾದ್ಯಂತ ಸಮಗ್ರ ಶಾಲಾ ಅಭಿವೃದ್ಧಿ ಅಡಿ ಕಾಂಪೌಂಡ್, ಶೌಚಾಲಯ, ಅಡುಗೆ ಕೋಣೆ, ಕ್ರೀಡಾಂಗಣ, ಮಳೆನೀರು ಕೊಯ್ಲು ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಸಾಧನೆ ಮಾಡಲು ಇದು ಪ್ರೇರಣೆಯಾಗಿದೆ ಎಂದು ತಿಳಿಸಿದ್ದಾರೆ.
ಅಮೃತಸರೋವರ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆಯೂ ಪ್ರಥಮ ಸ್ಥಾನ ಗಳಿಸಿದ್ದು,ರಾಜ್ಯದಲ್ಲಿಯೇ ಅತ್ಯುತ್ತಮ ಯಶಸ್ವಿ ೭೫ ಅಮೃತ ಸರೋವರ ಅನುಷ್ಠಾನ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಭಾಜನವಾಗಿದ್ದು, ಕೋಲಾರ ಜಿಲ್ಲಾ ಪಂಚಾಯತಿ ಸಿಇಓ ಯುಕೇಶ್ ಕುಮಾರ್ ಹಾಗೂ ಯೋಜನಾ ನಿರ್ದೇಶಕರಾದ ಶೃತಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಕಳೆದ ತಿಂಗಳು ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲೆಯಲ್ಲಿಯೇ ನರೇಗಾ ಹಾಗೂ ಇತರೆ ಎಲ್ಲಾ ಯೋಜನೆಗಳನ್ನು ಅತ್ಯುತ್ತಮವಾಗಿ ಅನುಷ್ಠಾನಿಸಿದ ತಾಲೂಕು ಎಂಬ ಹೆಗ್ಗಳಿಕೆಗೆ ಕೋಲಾರ ತಾಲೂಕು ಪಂಚಾಯತಿ ಆಯ್ಕೆಯಾಗಿದ್ದು, ಕೋಲಾರ ಜಿಲ್ಲಾ ಪಂಚಾಯತಿ ಸಿಇಓ ಯುಕೇಶ್ ಕುಮಾರ್ ಹಾಗೂ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹಾದೇವನ್ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು ಎಂದು ಸ್ಮರಿಸಿದ್ದಾರೆ.
ದೊಡ್ಡಹಸಾಳ ಗ್ರಾ.ಪಂಗೆ ೨೦೧೯-೨೦, ೨೦೨೧-೨೨ ನೇ ಸಾಲಿನ ಪುರಸ್ಕಾರ, ವಕ್ಕಲೇರಿ ಗ್ರಾ.ಪಂಗೆ ೨೦೨೦-೨೧ ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ.
ಪ್ರಶಸ್ತಿ ಸ್ವೀಕಾರ ಕಾರ್ಯಕ್ರಮದಲ್ಲಿ ತಾಪಂ ಸಹಾಯಕ ನಿರ್ದೇಶಕ ಅಶೋಕ್ ಕುಮಾರ್, ಸುನಿತ, ಪಿಡಿಒ ಗಳಾದ ಸಿ.ಆರ್.ಗೌಡ ಪಿಡಿಓ ಮಂಜುನಾಥ್ ಪ್ರಸಾದ್ ಪಿಡಿಓ ಅನುರಾಧ, ತಾಂತ್ರಿಕ ಸಂಯೋಜಕ ಹರೀಶ್, ಐಇಸಿ ಸಂಯೋಜಕ ಭಾಸ್ಕರ್ ಹಾಗೂ ದೊಡ್ಡಹಸಾಳ, ವಕ್ಕಲೇರಿ ಮತ್ತು ಮದನಹಳ್ಳಿ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳು ಕಾರ್ಯಕ್ರಮದದಲ್ಲಿ ಭಾಗಿಯಾಗಿದ್ದರು.