ಕೋಲಾರ ಡಿಸಿಸಿ ಬ್ಯಾಂಕ್‌ನಿಂದ ಉತ್ತಮ ಸಾಧನೆ

ಕೋಲಾರ,ಮಾ.೩೦: ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಬ್ಯಾಂಕಿಂಗ್ ವಹಿವಾಟು, ಗಣಕೀಕರಣ,ಮೊಬೈಲ್ ಬ್ಯಾಂಕಿಂಗ್, ಮೈಕ್ರೋ ಎಟಿಎಂ ಎಲ್ಲದರಲ್ಲೂ ಅಪ್ರತಿಮ ಸಾಧನೆ ಮಾಡಿದ್ದು, ಕುಂಠಿತಗೊಂಡಿರುವ ಠೇವಣಿ ಸಂಗ್ರಹವನ್ನು ಗಂಭೀರವಾಗಿ ಪರಿಗಣಿಸುವಂತೆ ಬ್ಯಾಂಕ್ ಅಧಿಕಾರಿ,ಸಿಬ್ಬಂದಿಗೆ ನಬಾರ್ಡ್ ಎಜಿಎಂ ನಟರಾಜನ್ ಕಿವಿಮಾತು ಹೇಳಿದರು. ಬ್ಯಾಂಕಿನ ಸಭಾಂಗಣದಲ್ಲಿ ಆರ್ಥಿಕ ವರ್ಷದ ಕೊನೆಯ ಜಿಲ್ಲಾಮಟ್ಟದ ಟಾಸ್ಕ್‌ಪೋರ್ಸ್ ಸಭೆಯಲ್ಲಿ ಭಾಗವಹಿಸಿ, ಬ್ಯಾಂಕಿನ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡುತ್ತಿದ್ದರು.
ಕಳೆದ ಏಳೂವರೆ ವರ್ಷಗಳ ಹಿಂದೆ ಈ ಬ್ಯಾಂಕ್ ಕಥೆ ಮುಗಿಯಿತು ಎಂದೇ ಭಾವಿಸಲಾಗಿತ್ತು ಆದರೆ, ಇದೀಗ ಬ್ಯಾಂಕ್ ಅತ್ಯಂತ ವೇಗವಾಗಿ ಬೆಳೆಯುವ ಮೂಲಕ ದೇಶದ ಸಹಕಾರಿ ವ್ಯವಸ್ಥೆಯೇ ಇತ್ತ ತಿರುಗಿ ನೋಡುವಂತೆ ಮಾಡಿದೆ ಎಂದರು.
ಬ್ಯಾಂಕಿನ ಈ ಸಾಧನೆಯಲ್ಲಿ ಡಿಸಿಸಿ ಬ್ಯಾಂಕ್ ಮತ್ತು ಈ ವ್ಯಾಪ್ತಿಯ ಎಲ್ಲಾ ಪ್ಯಾಕ್ಸ್‌ಗಳ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯ ಪರಿಶ್ರಮ ಶ್ಲಾಘನೀಯ ಎಂದರು.
ಇಂದು ಕೋಲಾರ ಡಿಸಿಸಿ ಬ್ಯಾಂಕ್ ಅತ್ಯುತ್ತಮ ಸ್ಥಾಯಿಯಲ್ಲಿದೆ, ಇದು ಹೀಗೆ ಮುಂದುವರೆಯಲು ಠೇವಣಿ ಸಂಗ್ರಹ, ವೈಯಕ್ತಿಕ ಖಾತೆಗಳನ್ನು ತೆರೆಯುವುದು, ಸಹಕಾರ ಸಂಘಗಳ ಖಾತೆಗಳನ್ನು ಹೆಚ್ಚಿಸುವುದು ಅತ್ಯಗತ್ಯವಾಗಿದೆ, ನೀವು ಇಡುವ ಪ್ರತಿ ಹೆಜ್ಜೆ ಎಚ್ಚರದಿಂದಿಡಿ, ಠೇವಣಿ ಹೆಚ್ಚಳದಿಂದ ಬ್ಯಾಂಕಿನ ಪ್ರಗತಿ ಮತ್ತಷ್ಟು ಹೆಚ್ಚಲಿದೆ ಎಂಬ ಸತ್ಯ ಅರಿತು ಕೆಲಸ ಮಾಡಿ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಬ್ಯಾಂಕಿಂಗ್‌ನಲ್ಲಿ ಪಾರದರ್ಶಕ ವಹಿವಾಟಿಗೆ ಏನೆಲ್ಲಾ ಸಾಧ್ಯವೋ ಅದೆಲ್ಲವನ್ನು ಶಕ್ತಿ ಮೀರಿ ಮಾಡಿದ್ದೇವೆ, ಆದರೆ ಠೇವಣಿ ಸಂಗ್ರಹದಲ್ಲಿ ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿ, ಇದನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದರು.
ಎರಡು ಜಿಲ್ಲೆಗಳ ಪ್ರತಿಕುಟುಂಬಕ್ಕೂ ಡಿಸಿಸಿ ಬ್ಯಾಂಕಿನ ಸೇವೆ ತಲುಪಬೇಕು ಆಗ ಮಾತ್ರ ತೃಪ್ತಿ ಸಿಗಲು ಸಾಧ್ಯ ಎಂದ ಅವರು, ಸಾಲಕ್ಕಾಗಿ ಮಾತ್ರ ಡಿಸಿಸಿ ಬ್ಯಾಂಕ್ ಕಡೆ ಬರುವಜನ ಠೇವಣಿಯನ್ನೂ ಇಲ್ಲೇ ಇಡುವಂತಾದರೆ ಮತ್ತಷ್ಟು ಬಡವರಿಗೆ ನೆರವಾಗಲು ಸಾಧ್ಯವಿದೆ ಎಂದರು.
ದಿವಾಳಿಯಾಗಿದ್ದ ಬ್ಯಾಂಕನ್ನು ಇಂದು ಉಳಿಸಿ ಬೆಳೆಸಲಾಗಿದೆ, ಸಿಬ್ಬಂದಿಗೆ ಉತ್ತಮ ವೇತನ ನೀಡುತ್ತಿದ್ದೇವೆ, ಆರೋಗ್ಯ ವಿಮಾ ಸೌಲಭ್ಯ ಕಲ್ಪಿಸಿದ್ದೇವೆ, ಎಲ್ಲಾ ರೀತಿಯ ಸೌಕರ್ಯಗಳು ಸಿಕ್ಕ ನಂತರವೂ ನೀವು ಬ್ಯಾಂಕಿನ ಋಣ ತೀರಿಸುವ ಪ್ರಯತ್ನ ಮಾಡದಿದ್ದರೆ ಹೇಗೆ ಎಂದು ಪ್ರಶ್ನಿಸಿ, ಈ ಬಾರಿಯಾದರೂ ಠೇವಣಿ ಸಂಗ್ರಹಕ್ಕೆ ಒತ್ತು ನೀಡಿ ಎಂದು ತಾಕೀತು ಮಾಡಿದರು.
ಬ್ಯಾಂಕಿನ ಉಪಾಧ್ಯಕ್ಷ ಎ.ನಾಗರಾಜ್, ನಾವು ಅಧಿಕಾರ ವಹಿಸಿಕೊಂಡಾಗ ಮುಳುಗಿದ್ದ ಸಂಸ್ಥೆಗೆ ಇವರು ನೇತೃತ್ವ ಎಂದು ಹೀಗಳೆದವರಿದ್ದರು, ಆದರೆ ಇಂದು ಬ್ಯಾಂಕ್ ಬಗ್ಗೆ ಟೀಕಿಸಿದವರೇ ಇಂದು ಗೌರವದಿಂದ ಕಾಣುವಂತೆ ಬ್ಯಾಂಕ್ ಬೆಳೆದಿದೆ ಎಂದರು.
ಸಿಬ್ಬಂದಿ ಸಾಲ ನೀಡಿಕೆ,ಸಾಲ ವಸೂಲಾತಿಗೆ ಸೀಮಿತವಾಗದೇ ಠೇವಣಿ ಸಂಗ್ರಹಿಸುವ ಮೂಲಕ ಬ್ಯಾಂಕಿನ ಶಕ್ತಿ ಹೆಚ್ಚಿಸಬೇಕು ಎಂದು ಸಲಹೆ ನೀಡಿದ ಅವರು, ಬ್ಯಾಂಕಿನ ಎನ್‌ಪಿಎ ಕಡಿಮೆಯಾಗಿರುವ ಕುರಿತು ಸಂತಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಬ್ಯಾಂಕಿನ ನಿರ್ದೇಶಕ ಚೆನ್ನರಾಯಪ್ಪ, ಎಂಡಿ ವೆಂಕಟೇಶ್, ಎಜಿಎಂಗಳಾದ ಬೈರೇಗೌಡ, ಶಿವಕುಮಾರ್,ನಾಗೇಶ್, ಖಲೀಮುಲ್ಲಾ ಮತ್ತಿತರರು ಹಾಜರಿದ್ದರು.