ಕೋಲಾರ,ಮಾ,೩೧-ಮರ್ಯಾದಾ ಪುರುಷೋತ್ತಮ ಶ್ರೀರಾಮನ ಸ್ಮರಣೆ, ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆಯ ಮೂಲಕ ಶ್ರೀರಾಮನವಮಿ ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.
ಕೋಲಾರ ಜಿಲ್ಲೆಗೂ ಶ್ರೀರಾಮ, ಹನುಮನಿಗೂ ವಿಶೇಷ ನಂಟು ಜಿಲ್ಲೆಯಲ್ಲಿ ಹನುಮನ ದೇಗುಲವಿಲ್ಲದ ಊರೇ ಇಲ್ಲ, ಪ್ರತಿ ರಸ್ತೆಯಲ್ಲೂ ಹನುಮನ ದೇಗುಲಗಳು ರಾರಾಜಿಸುವ ಮೂಲಕ ಶ್ರೀರಾಮ, ಹನುಮರ ಪೂಜೆ ನಿರಂತರವಾಗಿ ನಡೆದಿದೆ.
ಶ್ರೀರಾಮನವಮಿ ಅಂಗವಾಗಿ ಎಲ್ಲಾ ದೇವಾಲಯಗಳು, ರಸ್ತೆ ಬದಿಯಲ್ಲಿ ವಿವಿಧ ಸಂಘಟನೆಗಳು, ವ್ಯಾಪಾರಿಗಳು ಬಿಸಿಲ ತಾಪಕ್ಕೆ ದಣಿದು ಸಾಗುವವರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸುವ ಮೂಲಕ ಶ್ರೀರಾಮನಮಿ ಸಡಗರದಿಂದ ಆಚರಿಸಿದರು.
ಎಪಿಎಂಸಿ, ನಗರದ ಹೊರವಲಯದ ತೋಟಗಾರಿಕಾ ಮಹಾವಿದ್ಯಾಲಯದ ಬಳಿ, ಕೀಲುಕೋಟೆ, ದೊಡ್ಡಪೇಟೆ, ರಾಮದೇವರ ಗುಡಿಬೀದಿ, ಕಿಲಾರಿಪೇಟೆ ವೇಣುಗೋಪಾಲಸ್ವಾಮಿ ದೇವಾಲಯ, ನಗರದ ಪಿಸಿ ಬಡಾವಣೆಯ ಶ್ರೀರಾಮ ಕಾಂಡಿಮೆಂಟ್ಸ್‌ನ ಸ್ನೇಹಿತರು ಸೇರಿದಂತೆ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಪೆಂಡಾಲ್ ಹಾಕಿ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಿದರು.
ಶ್ರೀರಾಮನವಮಿ ಅಂಗವಾಗಿ ನಗರದ ಬಸ್‌ನಿಲ್ದಾಣದ ಸಮೀಪದ ಶ್ರೀರಾಮದೇವರ ಗುಡಿಯಲ್ಲಿ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು.
ಇಡೀ ದೇವಾಲಯವನ್ನು ಹೂಗಳಿಂದ ಅಲಂಕರಿಸಲಾಗಿದ್ದು, ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ಭರದಿಂದ ನಡೆಯಿತು.ಇದಾದ ನಂತರ ಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆ ನಡೆದಿದ್ದು, ಮುಖಂಡರಾದ ರಾಘವಪ್ಪ, ರಾಮನ ಬೃಹತ್ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಕೋಲಾರ ಹೊರವಲಯದ ತೋಟಗಾರಿಕಾ ಮಹಾವಿದ್ಯಾಲಯದ ಸಮೀಪದ ಬೃಹತ್ ಶ್ರೀರಾಮ ಚಂದ್ರ ಮೂರ್ತಿಗೆ ಹಾಗೂ ಆಂಜನೇಯಸ್ವಾಮಿಗೆ ಶ್ರೀರಾಮನವಮಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ ದೇವಾಲಯಕ್ಕೆ ಆಗಮಿಸಿದ ಭಕ್ತಾಧಿಕಾಗಳಿಗೆ ಪಾನಕ, ಹೆಸರುಬೇಳೆ, ಮಜ್ಜಿಗೆ ವಿನಿಯೋಗ ಮಾಡಿದರು.ನಗರದ ದೊಡ್ಡಪೇಟೆಯ ಶ್ರೀರಾಮ ದೇವಸ್ಥಾನ, ವೆಂಕಟರಮಣಸ್ವಾಮಿ, ಬ್ರಾಹ್ಮಣರ ಬೀದಿಯ ದೊಡ್ಡ ಆಂಜನೇಯಸ್ವಾಮಿ, ಕುರುಬರಪೇಟೆಯ ಪಂಚಮುಖಿ ಗಣಪತಿ, ನಗರದೇವತೆ ಕೋಲಾರಮ್ಮ ದೇವಾಲಯ, ಕೊಂಡರಾಜನಹಳ್ಳಿ ಆಂಜನೇಯಸ್ವಾಮಿ ದೇವಾಲಯಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.