ಕೋಲಾರ ಜಿಪಂಗೆ ನರೇಗಾ-ಅಮೃತ ಸರೋವರದ 6 ಪುರಸ್ಕಾರ

ಕೋಲಾರ,ಮಾ,19- ಕೇಂದ್ರ ಸರ್ಕಾರದ ನರೇಗಾ ಮತ್ತು ಅಮೃತ ಸರೋವರ ಯೋಜನೆ ಅನುಷ್ಠಾನದಲ್ಲಿ ಉತ್ತಮ ಸಾಧನೆಗಾಗಿ ಕೋಲಾರ ಜಿಲ್ಲೆಗೆ ೬ ಪ್ರಶಸ್ತಿಗಳು ಬಂದಿವೆ ಎಂದು ಜಿಪಂ ಸಿಇಒ ಯುಕೇಶ್ ಕುಮಾರ್ ತಿಳಿಸಿದ್ದಾರೆ.
೨೦೨೨-೨೩ನೇ ಸಾಲಿನಲ್ಲಿ ನರೇಗಾ ಯೋಜನೆ ಅನುಷ್ಠಾನದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಜಿಲ್ಲಾ, ತಾಲೂಕು ಹಾಗೂ ಗ್ರಾಪಂಗಳ ಪಟ್ಟಿಯನ್ನು ಕರ್ನಾಟಕ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಆಯುಕ್ತಾಲಯವು ಪ್ರಕಟಿಸಿದೆ.
ಈ ಪಟ್ಟಿಯಲ್ಲಿ ಉತ್ತಮ ಸಾಧನೆ ಮಾಡಿದ ಕೋಲಾರ ಜಿಪಂ ಹಾಗೂ ಕೆಲವು ತಾಪಂ ಮತ್ತು ಗ್ರಾಪಂಗಳು ಸೇರಿ ಒಟ್ಟು ೬ ಪ್ರಶಸ್ತಿಗಳು ಬಂದಿವೆ. ಮಾ.೨೪ರಂದು ಬೆಂಗಳೂರಿನಲ್ಲಿ ನಡೆಯುವ ಗಾಂಧಿ ಗ್ರಾಮ ಪುರಸ್ಕಾರ ಮತ್ತು ನರೇಗಾ ಹಬ್ಬ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದು ಸಿಇಒ ಯುಕೇಶ್‌ಕುಮಾರ್ ತಿಳಿಸಿದ್ದಾರೆ.
ಮಕ್ಕಳ ಸ್ನೇಹಿ ಪಂಚಾಯತ್ ಪುರಸ್ಕಾರವು ಮುಳಬಾಗಿಲು ತಾಪಂಗೆ, ಅಮೃತ ಸರೋವರ ಪುರಸ್ಕಾರವು ಕೋಲಾರ ಜಿಪಂಗೆ ಮತ್ತು ಕೋಲಾರ ತಾಪಂಗೆ ಹಾಗೂ ಕೋಲಾರ ತಾಲೂಕು ಮದನಹಳ್ಳಿ ಗ್ರಾಪಂಗೆ ಲಭಿಸಿದೆ.ರೇಷ್ಮೆ ಸ್ನೇಹಿ ಪಂಚಾಯತ್ ಪುರಸ್ಕಾರವು ಕೋಲಾರ ತಾಲೂಕು ರೇಷ್ಮೆ ಇಲಾಖೆಗೆ, ಜಲಸಂಜೀವಿನಿ ಪಂಚಾಯತ್ ಪುರಸ್ಕಾರವು ಶ್ರೀನಿವಾಸಪುರ ತಾಲೂಕು ಜೆ.ತಿಮ್ಮಸಂದ್ರ ಪಂಚಾಯತ್‌ಗೆ ಲಭಿಸಿದೆ ಎಂದು ಯುಕೇಶ್‌ಕುಮಾರ್ ವಿವರಿಸಿದ್ದಾರೆ.