ಕೋಲಾರ ಕ್ಷೇತ್ರಕ್ಕೆ ರಾಷ್ಟ್ರೀಯ ಪಕ್ಷಗಳಿಂದ ಅಭ್ಯರ್ಥಿಗಳೇ ಸಿಗುತ್ತಿಲ್ಲ

ಕೋಲಾರ,ಏ.೧೨:ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಏನೆಲ್ಲಾ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದು ಅನ್ನೋದನ್ನು ಆರು ತಿಂಗಳ ಹಿಂದೆಯೇ ಘೋಷಣೆ ಮಾಡಲಾಗಿದೆ ಆದರೆ ಎರಡು ರಾಷ್ಟ್ರೀಯ ಪಕ್ಷಗಳಿಗೆ ಇನ್ನೂ ಅಭ್ಯರ್ಥಿಗಳೇ ಸಿಕ್ಕಿಲ್ಲ ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ತಿಳಿಸಿದರು.
ತಾಲೂಕಿನ ವಕ್ಕಲೇರಿ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿ ಮಾತನಾಡಿದ ಅವರು ಜನರ ಕಷ್ಟಗಳಿಗೆ ಸ್ಪಂದಿಸುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ ಯೋಜನೆಗಳನ್ನು ಅನುಷ್ಠಾನ ಮಾಡಲು ಮುಂದಾಗಿದ್ದಾರೆ ನಿಮಗೆ ಬರುವ ಆದಾಯ ನಿಮ್ಮ ಕುಟುಂಬ ನಿರ್ವಹಣೆಗೂ ಸಾಲುವುದಿಲ್ಲ ಅಂತಹ ಸಂದರ್ಭದಲ್ಲಿ ಉಚಿತ ಶಿಕ್ಷಣ, ಆರೋಗ್ಯ, ವಸತಿ ಸೌಕರ್ಯ ಮಾಡಲು ನಮ್ಮ ಪಕ್ಷವು ಮುಂದಾಗಿದ್ದು ಜೆಡಿಎಸ್ ಪಕ್ಷದ ಸಿಎಂಆರ್ ಶ್ರೀನಾಥ್ ಅವರನ್ನು ಬೆಂಬಲಿಸಿ ಕುಮಾರಸ್ವಾಮಿ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿನ ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ದುರಾಡಳಿತದಿಂದ ಜನತೆ ರೋಸಿ ಹೋಗಿದ್ದಾರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಜನ ಮನಸ್ಸು ಮಾಡಿದ್ದಾರೆ ಜೊತೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ಎಚ್.ಡಿ. ಕುಮಾರಸ್ವಾಮಿ ಈಗಾಗಲೇ ರಾಜ್ಯವ್ಯಾಪಿ ಪ್ರವಾಸ ಆರಂಭಿಸಿದ್ದಾರೆ. ನಾಡಿನ ಸಮಸ್ತ ಜನತೆಯ ಹಿತದೃಷ್ಟಿಯಿಂದ ಆರೋಗ್ಯ, ಶಿಕ್ಷಣ, ಯುವಕರಿಗೆ ಉದ್ಯೋಗ, ನೀರಾವರಿ ಯೋಜನೆ ಸೇರಿದಂತೆ ಹಲವು ಜನಪರ, ರೈತಪರ ಯೋಜನೆಗಳನ್ನು ಸಿದ್ಧಪಡಿಸಿದ್ದಾರೆ ಅನುಷ್ಠಾನ ಮಾಡಲು ಜೆಡಿಎಸ್ ಪಕ್ಷಕ್ಕೆ ಒಂದು ಅವಕಾಶ ನೀಡುವಂತೆ ಮನವಿ ಮಾಡಿದರು.
ತಾಪಂ ಮಾಜಿ ಸದಸ್ಯ ಹಾಗೂ ವಕ್ಕಲೇರಿ ಸೊಸೈಟಿ ಅಧ್ಯಕ್ಷ ಪಾಲಾಕ್ಷಿಗೌಡ ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಹೊರಗಿನ ವ್ಯಕ್ತಿಗಳಿಗೆ ಇನ್ನೂ ಕಾಯುತ್ತಿದ್ದಾರೆ ಅವರಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ ಕ್ಷೇತ್ರವು ಅಭಿವೃದ್ಧಿಯಾಗಬೇಕು ಎಂದರೆ ಸ್ಥಳೀಯ ಹಾಗೂ ವಿದ್ಯಾವಂತ ನಿಮ್ಮ ಕಷ್ಟಗಳಿಗೆ ಸದಾಕಾಲವೂ ಸಿಗುವ ಸಿಎಂಆರ್ ಶ್ರೀನಾಥ್ ಅವರು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು ಮತದಾರರು ಇವರಿಗೆ ಮತ ಹಾಕುವ ಮೂಲಕ ರಾಜ್ಯದಲ್ಲಿ ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಮುಖಂಡರಾದ ಜೆಟ್ ಅಶೋಕ್, ಅರಾಭಿಕೊತ್ತನೂರು ನಂಜುಂಡಗೌಡ, ಸೊಸೈಟಿ ಆನಂದ್ ಕುಮಾರ್, ರಮೇಶ್, ಸುಧಾಕರ್, ಮುನಿಯಪ್ಪ, ಚಿನ್ನಮ್ಮ, ಮುನೇಗೌಡ, ಗೋಪಾಲಪ್ಪ, ನವೀನ್, ಇಲಿಯಾಜ್ ಖಾನ್, ಮುನಿರೆಡ್ಡಿ, ತಿಮ್ಮಣ್ಣ, ಭೀಮಣ್ಣ, ಚಲಪತಿ, ದೇವೇಗೌಡ, ಸೋಮಣ್ಣ ಸಿ.ವಿ ಮಂಜುನಾಥ್, ಮುಂತಾದವರಿದ್ದರು.