ಕೋಲಾರ ಕೃಷಿ ಪದ್ಧತಿ ರಾಜ್ಯಕ್ಕೆ ವಿಸ್ತರಣೆ:ಕೃಷಿ ಸಚಿವ ಬಿ.ಸಿ.ಪಾಟೀಲ್

ವೀರಭದ್ರಗೌಡ ಎನ್ ಬಳ್ಳಾರಿ

ಬಳ್ಳಾರಿ ನ 19 : ಬಹುಬೆಳೆ ಬೆಳೆಯುವುದರ ಮೂಲಕ ಬದುಕು ಕಟ್ಟಿಕೊಂಡ ಕೋಲಾರದ ರೈತರು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು, ಕೋಲಾರದ ಕೃಷಿ ಪದ್ಧತಿಯನ್ನು
ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಅವರು‌ ಇಂದು ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲ ಹಮ್ಮಿಕೊಂಡಿದ್ದ 67ನೇ ರಾಜ್ಯಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಹೊಂಡು ಮಾತನಾಡಿದರು.

ನೀರಿನ ಸಮಸ್ಯೆ ಎದುರಿಸುತ್ತಿರುವ ಕೋಲಾರ ಜಿಲ್ಲೆಯ ರೈತರು ಬಹುಬೆಳೆ ಬೆಳೆಯುವುದರ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಂಡು ನೆಮ್ಮದಿಯಿಂದ ಇದ್ದರೇ ಇಡೀ ಜಿಲ್ಲೆಯಾದ್ಯಂತ ನೀರಾವರಿಯೇ ಇರುವ‌ ಮಂಡ್ಯ ಜನರು ಆತ್ಮಹತ್ಯೆ ಮೋರೆಹೊಗುತ್ತಿದ್ದಾರೆ ಮತ್ತು ನೆಮ್ಮದಿಯಿಲ್ಲ. ಇದಕ್ಕೆಲ್ಲ ಕಾರಣ ಕೃಷಿ ಪದ್ಧತಿ ಸರಿಯಿಲ್ಲದಿರುವುದು. ಸಮಗ್ರ ಕೃಷಿ ಪದ್ಧತಿಯತ್ತ ರೈತರು ಮುಖಮಾಡಬೇಕು.

ಸರಕಾರವೇ ರೈತರ ಮನೆಬಾಗಿಲಿಗೆ:
ಸರಕಾರವೇ ರೈತರ ಮನೆಬಾಗಿಲಿಗೆ ತೆರಳಿ ಅವರ ನೋವು-ನಲಿವುಗಳಿಗೆ ಸ್ಪಂದಿಸಿ ಅವರಲ್ಲಿ ಅತ್ಮಸ್ಥೈರ್ಯ ತುಂಬುವುದರ ಮೂಲಕ ರೈತ ಎದೆಯುಬ್ಬಿಸಿ ನಡೆಯಬೇಕು ಎಂಬುದು ನಮ್ಮ ಸರಕಾರದ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ನಾನು ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಆಯೋಜಿಸಿ ಅವರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ತಿಂಗಳಿನಲ್ಲಿ 3ಗ್ರಾಮಗಳಲ್ಲಿ ಈ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಆಯೋಜಿಸಿ ಅವರ ದುಃಖ ದುಮ್ಮಾನಗಳಿಗೆ ದನಿಯಾಗುವುದರ ಜತೆಗೆ ಅವರಿಗೆ ಸಮಗ್ರ ಕೃಷಿ ಪದ್ಧತಿಯ ಅಗತ್ಯತೆ ಬಗ್ಗೆ ತಿಳಿವಳಿಕೆ ಮೂಡಿಸಲಾಗುವುದೆಂದರು.

ಕೃಷಿ ಸಂಜೀವಿನಿ, ಸ್ವಾಭಿಮಾನಿ ರೈತ ಕಾರ್ಡ್:
ಪ್ರಯೋಗಾಲಯದಲ್ಲಿ ಮಣ್ಣು‌ಪರೀಕ್ಷೆ ಮಾಡಿ ನೇರವಾಗಿ ರೈತರ ಭೂಮಿಗೆ ತೆರಳಿ ಅಗತ್ಯ ಸಲಹೆ ನೀಡುವುದಕ್ಕಾಗಿ ಕೊಪ್ಪಳದಲ್ಲಿ ಈಗಾಗಲೇ ವಾಹನಗಳನ್ನು ಖರೀದಿಸಲಾಗಿದ್ದು,ಬಳ್ಳಾರಿಯಲ್ಲಿಯೂ ಪ್ರತಿ ರೈತ ಸಂಪರ್ಕ ಕೇಂದ್ರಕ್ಕೆ ಒಂದು ವಾಹನಗಳಂತೆ ಡಿಎಂಎಫ್ ನಿಧಿ ಅಡಿ ಖರೀದಿಸಲಿದೆ ಎಂದು ಇವುಗಳಿಗೆ ಕೃಷಿ ಸಂಜೀವಿನಿ ಎಂದು ಹೆಸರಿಡಲಾಗಿದೆ. ಇವುಗಳಲ್ಲಿ ಡಿಪ್ಲೋಮಾ ಕೃಷಿ ಪದವೀಧರರು ಹಾಗೂ ಅಗತ್ಯ ಮಾಹಿತಿ ಇರಲಿದೆ. ಒಂದು ಫೋನ್ ನಂಬರ್ ನೀಡಲಾಗುತ್ತಿದ್ದು,ರೈತರು ಫೋನ್ ಮಾಡಿದರೇ ನೇರವಾಗಿ ಅವರ ಹೊಲಕ್ಕೆ ಕೃಷಿ ಸಂಜೀವಿನಿ ವಾಹನ ತೆರಳಿ ಅಗತ್ಯ ಮಾರ್ಗದರ್ಶನ ನೀಡಲಿದೆ ಎಂದು ಸಚಿವರು ಹೇಳಿದರು.

ರೈತರಿಗೆ ಅವರ ಹೆಸರು ಮತ್ತು ವಿವರ ಒಳಗೊಂಡ ಸ್ವಾಭಿಮಾನಿ ರೈತ ಹೆಸರಿನಲ್ಲಿ ಕಾರ್ಡ್ ನೀಡಲು ತೀರ್ಮಾನಿಸಲಾಗಿದ್ದು, ಮುಂದಿನ ತಿಂಗಳು ಬಳ್ಳಾರಿ ಮತ್ತು ಕೊಪ್ಪಳದಲ್ಲಿ ಇದು ಅನುಷ್ಠಾನಕ್ಕೆ ಬರಲಿದೆ.ನಂತರ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ವಿಸ್ತರಿಸಲಾಗುವುದು ಎಂದರು.