ಕೋಲಾರವನ್ನ ಮಾದರಿ ಜಿಲ್ಲೆಯನ್ನಾಗಿಸಲು ಪಣ

ಕೋಲಾರ,ಜು,೨೬- ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳಿರುವುದು ಗಮನಿಸಿದ್ದು ಅವುಗಳಿಗೆ ಶಾಶ್ವತವಾದ ಪರಿಹಾರಗಳನ್ನು ಹಂತ,ಹಂತವಾಗಿ ಕಲ್ಪಿಸಲು ಕ್ರಮ ಕೈಗೊಂಡು ರಾಜ್ಯದಲ್ಲಿ ಕೋಲಾರ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸಲು ಉತ್ತಮವಾದ ಆಡಳಿತ ನೀಡಲು ನಿಮ್ಮೆಲ್ಲಾರ ಸಹಕಾರದೊಂದಿಗೆ ಪಣ ತೊಡುವುದಾಗಿ ಜಿಲ್ಲಾಧಿಕಾರಿ ಅಕ್ರಂ ಪಾಷ ಘೋಷಿಸಿದರು.
ನಗರದ ಪತ್ರಕರ್ತರ ಭವನದಲ್ಲಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ ನಾನು ಇದೇ ರಾಜ್ಯದ, ತುಮಕೊರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕುಗ್ರಾಮದಲ್ಲಿ ಜನಿಸಿ ಇದೇ ಅವಿಭಜಿತ ಜಿಲ್ಲೆಯಲ್ಲಿ ಶಿಕ್ಷಣ ಪಡೆದ ಕನ್ನಡಿಗನಾಗಿದ್ದೇನೆ. ಕಳೆದ ೮ ವರ್ಷ ಉಪನ್ಯಾಸಕನಾಗಿ ವಿವಿಧ ಕಡೆ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಈ ಹುದ್ದೆಗೆ ಬಂದವನಾಗಿದ್ದೇನೆ. ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ ಕಾರ್ಯನಿರ್ವಾಹಿಸಿದ್ದು, ಇದೀಗ ಕೋಲಾರದಲ್ಲಿ ಕಾರ್ಯನಿರ್ವಹಿಸಲು ಸಿಕ್ಕಿರುವ ಅವಕಾಶವನ್ನು ಸದ್ಬಳಿಸಿ ಕೊಳ್ಳುವುದಾಗಿ ತಿಳಿಸಿದರು.
ಜಿಲ್ಲೆಯ ೧೭ ಇಲಾಖೆಗಳಲ್ಲಿ ನೇಮಕಾತಿಯ ಅಧಿಕಾರಿಗಳು ಇಲ್ಲ. ಕಂದಾಯ ಇಲಾಖೆಯಲ್ಲಿ ಶೇ ೬೦ ರಷ್ಟು ಸಿಬ್ಬಂದಿ ಕೊರತೆ ಇದೆ. ೩೦೦ ಗ್ರಾಮ ಲೆಕ್ಕಿಗರ ಪೈಕಿ ೭೧ ಹುದ್ದೆಗಳು ಖಾಲಿ ಇದೆ. ವಿವಿಧ ಇಲಾಖೆಗಳಿಂದ ಬೇರೆ ಜಿಲ್ಲೆಗಳಲ್ಲಿ ನಿಯೋಜಿತ ಅಧಿಕಾರಿಗಳನ್ನು ವಾಪಾಸ್ ಕರೆಸಲು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ನನಗೆ ಹುದ್ದೆಯ ಆಹಂ ಇಲ್ಲ. ಎಲ್ಲಾ ಅಧಿಕಾರಿಗಳೊಂದಿಗೆ ಜಿಲ್ಲೆಯ ಶ್ರೇಯೋಭಿವೃದ್ದಿಗೆ ಕಾರ್ಯನಿರ್ವಹಿಸುತ್ತೇನೆ. ಮೈಸೂರು, ಮಡಿಕೇರಿ, ಹಾಸನ,ಬೆಂಗಳೂರು ಸೇರಿದಂತೆ ಅನೇಕ ಕಡೆ ಕಾರ್ಯನಿರ್ವಹಿಸಿದ್ದೇನೆ. ಆಲ್ಪಸಂಖ್ಯಾತರ ಇಲಾಖೆ, ಕಾರ್ಮಿಕ ಇಲಾಖೆ, ಸಕ್ಕರೆ ಕಂಪನಿ, ಹಿಂದುಳಿದ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದೇನೆಂದು ಹೇಳಿದರು,
ಕಾರ್ಮಿಕ ಇಲಾಖೆಯಲ್ಲಿದ್ದಾಗ ೧೭ ಲಕ್ಷ ವಿಧ್ಯಾರ್ಥಿಗಳಿಗೆ ವಿಶೇಷವಾದ ವೇತನದ ಸೌಲಭ್ಯ ಕಲ್ಪಸಿದ್ದೇನೆ, ೨೦ ವಿವಿಧ ಯೋಜನೆಗಳಲ್ಲಿ ವಿದ್ಯಾರ್ಥಿಗಳಿಗೆ ವಿಶೇಷವಾದ ಶೈಕ್ಷಣಿಕ ನೆರವು ಸಿಗುವಂತೆ ಮಾಡಿರುವೆ,೧೫೦ ಮೂರಾರ್ಜಿ ವಸತಿ ಶಾಲೆ, ೩೫೦ ವಿದ್ಯಾರ್ಥಿಗಳ ವಸತಿ ನಿಲಯಗಳು, ಸೇರಿದಂತೆ ಉನ್ನತವಾದ ಶಿಕ್ಷಣಕ್ಕೆ ಪೂರಕವಾದ ಅನೇಕ ಸೌಲಭ್ಯಗಳನ್ನು ಕಲ್ಪಿಸಿ ಪ್ರೋತ್ಸಾಹಿಸುವ ಕೆಲಸ ನಿರ್ವಹಿಸಿರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಮೂವರು ಅಧಿಕಾರಿಗಳಿಗೆ ಜಿಲ್ಲಾ ಪತ್ರಕರ್ತರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ವಾರ್ತ ಮತ್ತು ಪ್ರಸಾರ ಇಲಾಖೆಯ ಸಹಾಯಕ ನಿರ್ದೇಶಕರಾದ ಚೇತನ್ ಕುಮಾರ್ ಉಪಸ್ಥಿತರಿದ್ದರು