ಕೋಲಾರದ ರೈತನಿಗೆ ಜಾಕ್ ಪಾಟ್ ಟೊಮೆಟೊ ಮಾರಿ ಒಂದೇ ದಿನ 38 ಲಕ್ಷ ಗಳಿಕೆ

ಕೋಲಾರ,ಜು.14-ಜಿಲ್ಲೆಯ ರೈತ ಕುಟುಂಬವೊಂದು ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದೇ ದಿನ ಕಳೆದ ಜು.11ರಂದು 2 ಸಾವಿರ ಬಾಕ್ಸ್ ಟೊಮೆಟೊವನ್ನು 38 ಲಕ್ಷ ರೂ.ಗೆ ಮಾರಾಟ ಮಾಡುವ ಮೂಲಕ ದಾಖಲೆ ಮಾಡಿದೆ.
ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲದ ಪ್ರಭಾಕರ್ ಗುಪ್ತಾ ಮತ್ತು ಅವರ ಸಹೋದರರು ತಲಾ 15 ಕೆಜಿಯ ಬಾಕ್ಸ್‌ಗೆ 1900 ರೂ.ನಂತೆ ಜು.11ರಂದು ಮಾರಾಟ ಮಾಡಿದ್ದು,15 ಕೆಜಿಯ ಟೊಮೆಟೊ ಬಾಕ್ಸ್ ಗರಿಷ್ಠ 2,200 ರೂ.ನಂತೆ ಮಾರಾಟವಾಗಿತ್ತು. ಆದರೆ ಜು.12ರಂದು ಅದೇ ಬಾಕ್ಸ್‌ನ ಗರಿಷ್ಠ ಬೆಲೆ 1800 ರೂ. ಇತ್ತು.
ಬೇತಮಂಗಲದ 40 ಎಕರೆ ಜಮೀನಿನಲ್ಲಿ ಗುಪ್ತಾ ಮತ್ತು ಅವರ ಸಹೋದರರು ಕಳೆದ 40 ವರ್ಷದಿಂದ ತರಕಾರಿ ಕೃಷಿ ಮಾಡುತ್ತಿದ್ದಾರೆ. ರಸಗೊಬ್ಬರ ಮತ್ತು ಕೀಟನಾಶಕಗಳ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದರಿಂದ ಕುಟುಂಬವು ಉತ್ತಮ ಗುಣಮಟ್ಟದ ತರಕಾರಿಗಳನ್ನು ಬೆಳೆಯಲಾಗುತ್ತಿದೆ ಎಂದು ಪ್ರಭಾಕರ್‌ರ ಸಹೋದರ ಸುರೇಶ್ ವಿವರಿಸಿದರು. ಎರಡು ವರ್ಷದ ಹಿಂದೆ ಕೂಡ ಗುಪ್ತಾ ಕುಟುಂಬಕ್ಕೆ ಟೊಮೆಟೊಗೆ ಉತ್ತಮ ಬೆಲೆ ಸಿಕ್ಕಿತ್ತು. ಆಗ 15 ಕೆಜಿ ಟೊಮೆಟೊ ಬಾಕ್ಸ್‌ಗೆ 800 ರೂ.ನಂತೆ ಕುಟುಂಬವು ಮಾರಾಟ ಮಾಡಿದೆ. 2.5 ಎಕರೆಯಲ್ಲಿ ಟೊಮೇಟೊ ಬೆಳೆದಿದ್ದೇನೆ. ಒಂದು ಎಕರೆಯಲ್ಲಿ ಟೊಮೆಟೊ ಬೆಳೆಯಲು ಸುಮಾರು 2.5 ಲಕ್ಷ ರೂ. ಖರ್ಚಾಗಿದೆ. ನಾನು 2.5 ಎಕರೆಯಲ್ಲಿ 300 ಬಾಕ್ಸ್ ಟೊಮೆಟೊ ಬೆಳೆಯುತ್ತಿದ್ದೆ. ಈಗ ಕೇವಲ 90 ಬಾಕ್ಸ್ ಟೊಮೆಟೊ ಸಿಕ್ಕಿದೆ ಎಂದು ರೈತ ಎಸ್.ಬಿ.ಕುಮಾರ್ ವಿವರಿಸಿದರು.
ಕೋಲಾರ ಎಪಿಎಂಸಿ ಮಾರುಕಟ್ಟೆಯು ದೇಶದಲ್ಲಿ ಟೊಮೆಟೊಗೆ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಜು.11ರಂದು 15 ಕೆಜಿ ಟೊಮೆಟೊ ಬಾಕ್ಸ್‌ಗೆ ಗರಿಷ್ಠ 2,200 ರೂ. ದೊರೆತಿತ್ತು. ಕೋಲಾರದಿಂದ ದಿನಕ್ಕೆ 8,000 ಮೆಟ್ರಿಕ್ ಟನ್ ಟೊಮೆಟೊ ಪೂರೈಕೆಯಾಗುತ್ತಿತ್ತು. ಈಗ ಕೇವಲ 1,000 ಮೆಟ್ರಿಕ್ ಟೊಮೆಟೊ ಪೂರೈಕೆ ಮಾಡಲಾಗುತ್ತಿದೆ.