ಕೋಲಾರದಿಂದ ಸ್ಪರ್ಧಿಸುವಂತೆ ಹೇಳಿದರೆ ಸ್ಪರ್ಧಿಸುವೆ-ಬ್ಯಾಲಹಳ್ಳಿ

ಕೋಲಾರ,ಮಾ,೨೩-ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೋಲಾರದಿಂದ ಅಥವಾ ವರುಣ ಮತ್ತು ಬಾದಾಮಿಯಿಂದ ಸ್ಪರ್ಧೆ ಮಾಡುತ್ತಾರೆ ಎಂಬುದನ್ನು ಎರಡ್ಮೂರು ದಿನದಲ್ಲಿ ಹೈಕಮಾಂಡ್ ತೀರ್ಮಾನಿಸುತ್ತದೆ. ಆಗ ಅಂತಿಮ ತೆರೆ ಬೀಳುತ್ತದೆ, ಕೋಲಾರದಲ್ಲಿ ಸ್ಪರ್ಧಿಸಿದರೆ ನಾವು ೧೦೦ಕ್ಕೆ ೧೦೦ರಷ್ಟು ಗೆಲ್ಲಿಸಿಕೊಡುತ್ತೇವೆ ಅದಕ್ಕೆ ಸರ್ವಸಿದ್ದತೆ ನಡೆದಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಹೈಕಮಾಂಡ್ ಏನಾದರೂ ಸಿದ್ದರಾಮಯ್ಯರನ್ನು ಕೋಲಾರದಿಂದ ಸ್ಪರ್ಧೆ ಬೇಡವೆಂದು ಹೇಳಿದರೆ ಕೋಲಾರದಲ್ಲಿ ಸ್ಪರ್ಧೆಗೆ ಬಹಳಷ್ಟು ಆಕಾಂಕ್ಷಿಗಳಿದ್ದಾರೆ, ಆದರೆ ಅಂತಹ ಪರಿಸ್ಥಿತಿ ಇನ್ನೂ ನಿರ್ಮಾಣವಾಗಿಲ್ಲ, ಅಂತಹ ಪರಿಸ್ಥಿತಿ ನಿರ್ಮಾಣವಾದಲ್ಲಿ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ತಾಲೂಕಿನ ಎಲ್ಲ ಕಾಂಗ್ರೆಸ್ ಮುಖಂಡರು ಸೇರಿ ಒಂದು ತೀರ್ಮಾನಕ್ಕೆ ಬರುತ್ತೇವೆ, ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆ ಬಲಿಷ್ಠವಾಗಿದೆ, ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕಾಗಿದೆ, ಕೋಲಾರ ಅಥವಾ ವರುಣಾ ಮತ್ತು ಬಾದಾಮಿ ಎಂಬುದು ಸ್ಪಷ್ಟವಾಗಿ ತೀರ್ಮಾನವಾಗಬೇಕಾಗಿದೆ ಎಂದರು.
ಸಿದ್ದರಾಮಯ್ಯನವರು ಆಕರ್ಷಕ ವ್ಯಕ್ತಿಯಾಗಿರುವುದರಿಂದ ಅವರ ವಿಷಯ ಚರ್ಚೆಯಲ್ಲಿದೆ, ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿ ಬೆಳೆದಿದ್ದಾರೆ, ಆದ್ದರಿಂದ ಶನಿವಾರದಿಂದ ಸಿದ್ದರಾಮಯ್ಯರವರ ಕ್ಷೇತ್ರದ ಆಯ್ಕೆ ಮತ್ತು ಕೋಲಾರದ ಬಗ್ಗೆ ಚರ್ಚೆಯಾಗುತ್ತಿದೆ, ಈಗಾಗಲೇ ಕೋಲಾರಕ್ಕೆ ೩ ಬಾರಿ ಬಂದು ಹೋಗಿದ್ದಾರೆ, ಕೋಲಾರ ಕ್ಷೇತ್ರವು ಒಂದಾಗಿದೆ, ಹೈಕಮಾಂಡ್ ಬಳಿ ನನ್ನ ಕ್ಷೇತ್ರದ ಆಯ್ಕೆ ಬಗ್ಗೆ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರು ರಾಜ್ಯಾದ್ಯಂತ ಸಂಚರಿಸಿ ಎಲ್ಲಾ ಕ್ಷೇತ್ರದಲ್ಲಿಯೂ ನಾವೇ ಸ್ಪರ್ಧಿಗಳೆಂದು ಹೇಳುತ್ತಿದ್ದಾರೆ, ಹಾಗೆಯೇ ಹೇಳಲೇ ಬೇಕಾಗುತ್ತದೆ, ಏಕೆಂದರೆ ಅವರು ಈ ರಾಜ್ಯದ ಪರಮೋರ್ಚಾ ನಾಯಕರು, ಆಯಾ ಕ್ಷೇತ್ರಗಳಿಗೆ ಹೋದಲ್ಲಿ ನಾವೇ ಅಭ್ಯರ್ಥಿ ಎಂದು ಮತ ನೀಡಿ ಎಂದು ಕೇಳುತ್ತಾರೆ, ಕೋಲಾರದಿಂದ ಸ್ಪರ್ಧಿಸುವ ಬಗ್ಗೆ ಹೈಕಮಾಂಡ್ ಬಳಿ ಚರ್ಚೆಯಲ್ಲಿದೆ, ಈ ರೀತಿಯಲ್ಲಿರುವಾಗ ನಾವು ಕೋಲಾರದಿಂದ ಸ್ಪರ್ಧೆ ಇಲ್ಲವೆಂದು ಹೇಳಲು ಬರುವುದಿಲ್ಲ ಎಂದರು.
ಕೋಲಾರದಲ್ಲಿ ಸಿದ್ದರಾಮಯ್ಯನವರಿಗೆ ಯಾವುದೇ ಆತಂಕವಿಲ್ಲ, ಬಿಜೆಪಿ ಮತ್ತು ಜೆಡಿಎಸ್‌ನವರ ಅಬ್ಬರದ ಚುನಾವಣೆಯಲ್ಲ ಮತದಾರರ ಚುನಾವಣೆ, ಕೋಲಾರದಲ್ಲಿ ಚುನಾವಣೆ ಕಾವು ಹೆಚ್ಚಾಗಿಲ್ಲ, ಪ್ರತಿಪಕ್ಷದವರು ಚುನಾವಣೆ ಬಗ್ಗೆ ಶೇ.೧೦ರಷ್ಟು ಮಾತನಾಡುತ್ತಿದ್ದಾರೆ, ಸಿದ್ದರಾಮಯ್ಯನವರು ಕೋಲಾರಕ್ಕೆ ಬರುವುದಾಗಿ ಘೋಷಣೆ ಮಾಡಿದ ನಂತರ ಐದಾರು ತಿಂಗಳಿನಿಂದ ಕೋಲಾರದಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿಯಾಗಿ ಬೇರೂರಿದೆ ಎಂದರು.