ಬೆಂಗಳೂರು,ಮಾ.೨೫-ನನಗೆ ವರುಣಾ ಟಿಕೆಟ್ ಘೋಷಣೆಯಾಗಿದೆ. ಕೋಲಾರದ ಟಿಕೆಟ್ ನೀಡುವಂತೆಯೂ ಹೈಕಮಾಂಡ್‌ನ್ನು ಕೇಳಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವರುಣಾ ಮತ್ತು ಕೋಲಾರ ಎರಡೂ ಕಡೆ ಟಿಕೆಟ್ ನೀಡುವಂತೆ ಹೈಕಮಾಂಡ್‌ನ್ನು ಕೇಳಿದ್ದೇನೆ. ವರುಣಾದಲ್ಲಿ ನಿಲ್ಲುವಂತೆ ಹೈಕಮಾಂಡ್ ಹೇಳಿದೆ. ಕೋಲಾರ ಟಿಕೆಟ್ ಕೂಡ ಕೊಡಿ ಎಂದು ಕೇಳಿದ್ದೇನೆ. ಆದರೆ, ಅಂತಿಮ ನಿರ್ಧಾರ ಹೈಕಮಾಂಡ್‌ನದ್ದು ಎಂದು ಅವರು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಒಂದೇ ಹೆಸರು ಗೊಂದಲವಿಲ್ಲದ ಟಿಕೆಟ್ ಘೋಷಣೆಯಾಗಿದೆ. ೬ ಹಾಲಿ ಶಾಸಕರ ಕ್ಷೇತ್ರದಲ್ಲಿ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಹೀಗಾಗಿ, ಆ ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆಯಾಗಿಲ್ಲ. ೨ನೇ ಪಟ್ಟಿಯಲ್ಲಿ ಅಭ್ಯರ್ಥಿಗಳ ಘೋಷಣೆಯಾಗಲಿದೆ ಎಂದರು. ಟಿಕೆಟ್ ನೀಡಲು ಸಮೀಕ್ಷೆ ಒಂದೇ ಮಾನದಂಡವಲ್ಲ ಕಾರ್ಯಕರ್ತರ ಅಭಿಪ್ರಾಯವೂ ಮುಖ್ಯ. ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರ ವರದಿಯನ್ನೂ ಪಡೆದಿದ್ದೇವೆ. ಎಲ್ಲರ ಅಭಿಪ್ರಾಯ ಆಧರಿಸಿ ಟಿಕೆಟ್ ನೀಡಲಾಗಿದೆ ಎಂದರು.