ಕೋಲಾರದಲ್ಲಿ ಸಿಎಂಆರ್.ಶ್ರೀನಾಥ್ ಗೆಲ್ಲಿಸಲು ಮನವಿ

ಕೋಲಾರ,ಮೇ,೮:ಲಾರದಿಂದ ಆರಂಭವಾದ ಪಂಚರತ್ನ ರಥಯಾತ್ರೆಯ ಮಾಹಿತಿ ರಾಜ್ಯದ ೬.೫ ಕೋಟಿ ಜನರಿಗೆ ಮುಟ್ಟಿಸಿದ್ದೇನೆ, ಜನರ ಬದುಕಿಗೆ ಅಗತ್ಯವಾದ ಯೋಜನೆಗಳ ಜಾರಿಗೆ ನನಗೆ ಅಧಿಕಾರ ನಮ್ಮ ಅಭ್ಯರ್ಥಿ ಸಿಎಂಆರ್.ಶ್ರೀನಾಥ್ ಗೆಲುವಿನ ಮೂಲಕವೇ ನೀಡಿ ೧೯೯೪ರ ಫಲಿತಾಂಶ ಮರುಕಳಿಸಿ ಜಿಲ್ಲೆಯಿಂದ ೬ ಜೆಡಿಎಸ್ ಶಾಸಕರನ್ನು ಗೆಲ್ಲಿಸಿ ಇಲ್ಲೇ ನನಗೆ ಮೊದಲ ವಿಜಯ ಸಿಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.
ನಗರದ ಬಂಗಾರಪೇಟೆ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ನಗರದಲ್ಲಿ ಬೃಹತ್ ರೋಡ್ ಷೋ ನಡೆಸಿದ ಅವರು, ನಗರದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ವೃತ್ತದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
ಪ್ರಚಾರದ ಕೊನೆಯ ಹಂತದ ಕಾಯಕ್ರಮದಲ್ಲಿದ್ದೇವೆ, ಈಗಾಗಲೇ ಮುಳಬಾಗಿಲು ಕುರುಡಮಲೆ ಗಣಪನಿಗೆ ಪೂಜೆ ಸಲ್ಲಿಸಿ ರಥಯಾತ್ರೆ ಆರಂಭಿಸಿ ನಾಡಿನಾದ್ಯಂತ ಸುತ್ತಿದ್ದೇನೆ, ನನ್ನ ಮನವಿ ನಾಡಿನ ಜನತೆಗೆ ಮುಟ್ಟಿಸಿದ್ದೇನೆ, ಜನತೆಗೆ ಹೊಸ ಭವಿಷ್ಯ ನಿರ್ಮಿಸುವ ನನ್ನ ಯೋಜನೆ, ಕನಸು ನನಸಾಗಿಸಲು ಕೋಲಾರದ ಜನತೆ ನನಗೆ ಗೆಲುವನ್ನು ಕೊಡುಗೆಯಾಗಿ ನೀಡಿ ಎಂದು ಕೋರಿದರು.
ರಾಜ್ಯದ ಜನತೆಗೆ ಹೊಸ ಭವಿಷ್ಯ ನಿರ್ಮಿಸುವ ಕಾರ್ಯಕ್ರಮ ಕೋಲಾರದಿಂದಲೇ ಆರಂಭಿಸಿದ್ದು ಖುಷಿ ತಂದಿದೆ, ಹೋದ ಕಡೆಗಳೆಲ್ಲೆಲ್ಲಾ ಉತ್ತಮ ಬೆಂಬಲ ವ್ಯಕ್ತವಾಗಿದೆ, ಎಲ್ಲಾ ಕಡೆಗಳಲ್ಲೂ ಸ್ಪಷ್ಟ ಬಹುಮತ ನೀಡುವ ಅಭಿಮಾನದಿಂದ ಜನತೆ ನನ್ನನ್ನು ಆಶೀರ್ವದಿಸಿದ್ದಾರೆ ಎಂದು ತಿಳಿಸಿದರು.
ಚುನಾವಣೆ ಘೋಷಣೆಯಾದ ನಂತರ ೫೦ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದೇನೆ, ಸಿಎಂಆರ್.ಶ್ರೀನಾಥ್ ರೈತರಾಗಿದ್ದು, ರೈತರ ಒಡನಾಟದಲ್ಲಿ ಅನ್ನದಾತರ ಸಂಕಷ್ಟ ಅರಿತಿದ್ದಾರೆ, ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಹೊರಗಿನವರು, ಶ್ರೀನಾಥ್ ಸ್ಥಳೀಯರಾಗಿದ್ದು, ನಿಮ್ಮ ಮನೆ ಮಗನಾಗಿ ನಿಮ್ಮೊಂದಿಗೆ ಇರುತ್ತಾರೆ ಎಂದರು.
ಮುಳಬಾಗಿಲು ಹಾಳು ಮಾಡಿದ ವ್ಯಕ್ತಿಯ ಹಿನ್ನಲೆ ನಿಮಗೆ ಗೊತ್ತಿಲ್ಲ, ಇಂತಹ ವ್ಯಕ್ತಿಯ ಹಿನ್ನಲೆ ಇಲ್ಲಿ ಹೇಳಲು ನನಗೆ ಇಷ್ಟವಿಲ್ಲ, ಕ್ಷೇತ್ರದ ಜನತೆ ಎಚ್ಚರಿಕೆಯಿಂದ ಮತ ಚಲಾಯಿಸಿ, ಶ್ರೀನಾಥ್ ಅವರನ್ನು ಆಯ್ಕೆ ಮಾಡಿ ಎಂದು ಕೋರಿದರು.
ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಲು ಪ್ರಯತ್ನ ನಡೆಸಿ ಇಲ್ಲಿ ಸಮಾವೇಶ ಮಾಡಿದಾಗ ಕೋಲಾರದ ತಾಯಂದಿರು ನಮ್ಮ ಸಾಲ ಮನ್ನಾ ಮಾಡಿ ಎಂದರೆ ಅದು ಅವರ ಕಿವಿಗೆ ಬೀಳಲೇ ಇಲ್ಲ, ತಾಯಂದಿರಿಗೆ ಉತ್ತರವೂ ನೀಡಲಿಲ್ಲ, ಮಹಿಳೆ ಸಲಬರಾದರೆ ಇಡೀ ಕುಟುಂಬ ಚೆನ್ನಾಗಿರುತ್ತದೆ ಎಂದು ಅರಿತಿದ್ದೇನೆ ಅದಕ್ಕಾಗಿಯೇ ನಾನು ನನ್ನ ತಾಯಂದಿರು ಋಣ ಮುಕ್ತರಾಗಬೇಕು ಎಂದು ನಿರ್ಧರಿಸಿದ್ದೇನೆ ಎಂದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಖಂಡಿತ ನೀರಾವರಿ, ಜನರ ಬದುಕಿಗೆ ಬೇಕಾದ ಯೋಜನೆಗಳ ಜಾರಿಗೆ ಆದ್ಯತೆ ನೀಡುತ್ತೇನೆ, ಕೋಲಾರಕ್ಕೆ ಮತ್ತು ಶ್ರೀನಾಥ್ ಗೆಲುವಿನ ವಿಜಯೋತ್ಸವಕ್ಕೆ ಬರುವೆ ಅದಕ್ಕೆ ನೀವು ಅವಕಾಶ ಮಾಡಿಕೊಡಿ ಎಂದುಕೋರಿದರು.
ಕೋಲಾರ ತಾಲ್ಲೂಕಿನ ಶ್ರೀನಿವಾಸಪುರ ಕ್ಷೇತ್ರ ವ್ಯಾಪ್ತಿಯ ಸುಗಟೂರು,ಹೋಳೂರು ಹೋಬಳಿ ಜನರಿದ್ದೀರಿ, ಅಲ್ಲಿ ಜಿ.ಕೆ.ವೆಂಕಟಶಿವಾರೆಡ್ಡಿ ಅವರನ್ನು ಬಹುಮತದಿಂದ ಗೆಲ್ಲಿಸಿ, ನಿಮ್ಮ ಸೇವೆಗೆ ಅವಕಾಶ ನೀಡಿ ಎಂದರು.
ಅಭ್ಯರ್ಥಿ ಸಿಎಂಆರ್.ಶ್ರೀನಾಥ್ ಮಾತನಾಡಿ, ಕಳೆದ ಐದು ವರ್ಷಗಳ ಕಾಲ ನಿಮ್ಮ ಮುಂದೆ ನಿಮ್ಮ ಸೇವೆ ಮಾಡಿದ್ದೇನೆ, ಕೋವಿಡ್ ಸಂಕಷ್ಟದಲ್ಲಿ ಸಾವಿಗೆ ಅಂಜದೇ ನಿಮ್ಮ ಮನೆ ಬಾಗಿಲಿಗೆ ಔಷಧಿ ತಂದು ಕೊಟ್ಟಿದ್ದೇನೆ, ಕೈಲಾದಷ್ಟು ಜನರ ಸೇವೆ ಮಾಡಿಕೊಂಡು ಬಂದಿದ್ದೇನೆ ಎಂದರು.
ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ, ಜಿಲ್ಲಾಧ್ಯಕ್ಷ ಬಣಕನಹಳ್ಳಿ ನಟರಾಜ್, ಜಮೀರ್ ಇತರರು ಇದ್ದರು.