ಕೋಲಾರದಲ್ಲಿ ಶ್ರೀರಾಮಸೇನೆಯಿಂದ ರಾಮೋತ್ಸವ-ಬೃಹತ್ ಶೋಭಾಯಾತ್ರೆ

ಕೋಲಾರ,ಏ. ೧-ಶ್ರೀರಾಮನವಮಿ ಅಂಗವಾಗಿ ಪ್ರತಿವರ್ಷದಂತೆ ಈ ಬಾರಿಯೂ ಶ್ರೀರಾಮಸೇನೆ ಸಂಘಟನೆ ನಗರದ ಗಾಂಧಿವನದಲ್ಲಿ ನಿರ್ಮಿಸಿದ್ದ ಶ್ರೀರಾಮನ ಬೃಹತ್ ಕಟೌಟ್, ಸುಂದರ ದೇವಾಲಯದ ಮುಂಭಾಗ ಬೃಹತ್ ಶೋಭಾಯಾತ್ರೆಗೆ ಸಂಸದ ಎಸ್.ಮುನಿಸ್ವಾಮಿ ಹಾಗೂ ಮಾಜಿ ಸಚಿವವರ್ತೂರು ಪ್ರಕಾಶ್ ಚಾಲನೆ ನೀಡಿದರು.
ಕಳೆದ ಮೂರು ದಿನಗಳಿಂದ ಗಾಂಧಿವನದಲ್ಲಿ ಶ್ರೀರಾಮನ ಬೃಹತ್ ಕಟೌಟ್ ನಿರ್ಮಿಸಿ ಇಡೀ ಎಂ.ಜಿ.ರಸ್ತೆಯಲ್ಲಿ ಕೇಸರಿ ಧ್ವಜಗಳು ರಾಜಿಸುವಂತೆ ಮಾಡಲಾಗಿತ್ತು. ಆದರೆ ರಾಮೋತ್ಸವದ ಅದ್ದೂರಿ ಆಚರಣೆಗೆ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಅಡ್ಡಿಯಾಯಿತು.
ಸಂಸದ ಎಸ್.ಮುನಿಸ್ವಾಮಿ ಹಾಗೂ ಮಾಜಿ ಸಚಿವ ವರ್ತೂರು ಪ್ರಕಾಶ್ ಸಾಂಕೇತಿಕವಾಗಿ ಶೋಭಾಯಾತ್ರೆಗೆ ಚಾಲನೆ ನೀಡಿ, ಶ್ರೀರಾಮನ ಆಶೀರ್ವಾದದಿಂದ ಜಿಲ್ಲೆಯಲ್ಲಿ ಒಳ್ಳೆಯ ಮಳೆ,ಬೆಳೆಯಾಗಲಿ, ಜನತೆ ಆರೋಗ್ಯದಿಂದಿರಲಿ ಎಂದು ಹಾರೈಸಿ ತೆರಳಿದರು.
ಮೆರವಣಿಗೆ ನಗರದ ಎಂ.ಜಿ.ರಸ್ತೆ, ಎಲೆಪೇಟೆ, ಕಾಳಮ್ಮ ಗುಡಿ ರಸ್ತೆ ಮೂಲಕ ನಗರದ ವಿವಿಧ ಮಾರ್ಗಗಳಲ್ಲಿ ಸಂಚರಿಸಿದ್ದು, ಮಾರ್ಗದುದ್ದಕ್ಕೂ ಜೈಶ್ರೀರಾಮ್ ಘೋಷಣೆ ಮುಗಿಲು ಮುಟ್ಟಿತ್ತು. ಸಾವಿರಾರು ಸಂಖ್ಯೆಯಲ್ಲಿದ್ದ ಯುವಕರು ಕೇಸರಿ ಧ್ವಜ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಇಡೀ ಎಂ.ಜಿ.ರಸ್ತೆ ಕೇಸರಿಮಯವಾಗಿತ್ತು.
ರಾಮೋತ್ಸವದ ಅಂಗವಾಗಿ ಕಳೆದ ಮೂರು ದಿನಗಳಿಂದಲೇ ಶ್ರೀರಾಮಸೇನೆ ಸಿದ್ದತೆ ನಡೆಸಿದ್ದು, ಇಡೀ ಎಂ.ಜಿ.ರಸ್ತೆ ವಿದ್ಯುತ್ ದೀಪಗಳಿಂದ ಝಗಮಗಿಸುವಂತೆ ಮಾಡಿದ್ದರು. ಆದರೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಎಲ್ಲಾ ವೈಭವವನ್ನು ತೆರವುಗೊಳಿಸಲಾಯಿತು.
ತಮಟೆನಾದ, ಡೊಳ್ಳು ಮತ್ತಿತರ ಕಲಾತಂಡಗಳ ತಾಳಕ್ಕೆ ಯುವಕರು ಕುಣಿಯುತ್ತಾ, ಜೈಶ್ರೀರಾಂ ಘೋಷಣೆಯೊಂದಿಗೆ ಮೆರವಣಿಗೆಗೆ ಮೆರಗು ನೀಡಿದರು.
ಮೆರವಣಿಗೆಯಲ್ಲಿ ಜಿಪಂ ಮಾಜಿ ಸದಸ್ಯ ಅರುಣ್ ಪ್ರಸಾದ್, ಬಂಕ್ ಮಂಜುನಾಥ್, ನಗರಸಭೆ ಸದಸ್ಯ ಮಂಜುನಾಥ್, ಶ್ರೀರಾಮಸೇನೆ ಬೆಂಗಳೂರು ಪದಾಧಿಕಾರಿಗಳಾದ ಸುಂದರೇಶ್, ಅಮರನಾಥ್, ಮಾದಾವರ ಪ್ರಕಾಶ್, ನಾಗರಾಜ್, ಜಿಲ್ಲಾಧ್ಯಕ್ಷ ರಮೇಶ್ ರಾಜ್, ಪದಾಧಿಕಾರಿಗಳಾದ ಸುಪ್ರೀತ್, ಅರುಣ್, ಸುಮನ್, ನವೀನ್, ಸಚಿನ್ ಚಿನ್ನಪ್ಪ, ಶಬರೀಷ್, ಅರಣ್ಯ ಅಭಿವೃದ್ದಿ ನಿಗಮದ ಸದಸ್ಯ ಕೆ.ಎಸ್.ರಾಜೇಂದ್ರ, ಬಜರಂಗದಳ ಜಿಲ್ಲಾ ಸಂಚಾಲಕ ಬಾಬು, ಮುಖಂಡ ಬಾಲಾಜಿ, ಕೆಯುಡಿಎ ಅಧ್ಯಕ್ಷ ವಿಜಯಕುಮಾರ್, ಸಿ.ಡಿ.ರಾಮಚಂದ್ರ, ಕೆಂಬೋಡಿ ನಾರಾಯಣಸ್ವಾಮಿ, ಅಡಿಕೆ ನಾಗರಾಜ್, ಜೀವನ್‌ರಾಜ್, ಚಲಪತಿ, ಅರುಣಮ್ಮ, ರಾಜೇಶ್ವರಿ ಇದ್ದರು.