ಕೋಲಾರದಲ್ಲಿ ಮಣ್ಣು ಮಾಫಿಯಾ: ಅಧಿಕಾರಿಗಳ ಶಾಮೀಲು ಶಂಕೆ

 • ಮಹೇಶ್.ಕೆ.ಎನ್.
  ಕೋಲಾರ,ಜ.೧೦:ಕೋಲಾರದಲ್ಲಿ ಒಂದು ಕಾಲದಲ್ಲಿ ೧೦೦ ಅಡಿ ಮಣ್ಣು ಅಗೆದರೆ ಚಿನ್ನ ಸಿಗುತ್ತಿತ್ತು, ಆದರೆ ಈಗ ಕೋಲಾರದ ಮಣ್ಣು ಸಹ ಚಿನ್ನವಾಗಿ ಬಿಟ್ಟಿದೆ. ಜಿಲ್ಲೆಯ ಕೆರೆ ಮಣ್ಣನ್ನು ಬಿಡದ ಮಾಫಿಯಾದವರು ಜಿಲ್ಲೆಯ ಕೆರೆಗಳಲ್ಲಿರುವ ಬೆಲೆ ಬಾಳುವ ಮಣ್ಣನ್ನ ಕೋಟ್ಯಾಂತರ ರೂಪಾಯಿಗಳಿಗೆ ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದಾರೆ.
  ಹಾಡಹಗಲೇ ಜೆಸಿಬಿಗಳಿಂದ ಕೆರೆಯಲ್ಲಿ ಮಣ್ಣು ಬಗೆಯುತ್ತಿದ್ದು, ಕೆರೆಯ ಸ್ವರೂಪವನ್ನೇ ನಾಶ ಪಡಿಸಿ ಕೆರೆಯ ಮಣ್ಣನ್ನೇ ಲೂಟಿ ಮಾಡುತ್ತಿದ್ದಾರೆ. ಹೌದು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಬಾಳಗಾನಹಳ್ಳಿ, ಲಕ್ಕೂರು, ಚಿಕ್ಕತಿರುಪತಿ, ಮೈಲಾಂಡಹಳ್ಳಿ ಗ್ರಾಮದ ಕೆರೆಗಳಲ್ಲಿ ಮಣ್ಣನ್ನು ಬಿಡದ ಮಾಫಿಯಾದವರು, ಜೆಸಿಬಿ ಯಂತ್ರಗಳ ಮೂಲಕ ಮಣ್ಣನ್ನ ತೆಗೆದು ರಾತ್ರೋರಾತ್ರಿ ಲಾರಿಗಳ ಮೂಲಕ ಹೊರ ರಾಜ್ಯಗಳಿಗೆ ಕಳುಹಿಸಿಕೊಡುತ್ತಿದ್ದಾರೆ. ಕೋಲಾರದಿಂದ ಕೋಟ್ಯಾಂತರ ರೂಪಾಯಿ ಮೌಲ್ಯದ ಔಷಧಿಯ ಗುಣಗಳಿರುವ, ವಿವಿಧ ಅಲಂಕಾರಿಕ ವಸ್ತುಗಳ ತಯಾರಿಕೆಗೆ ಬೇಕಾದಂತ, ಕೆಲವು ಸೌಂದರ್ಯವರ್ದಕಗಳ ತಯಾರಿಕೆಗೆ ಬೇಕಾದ ಮಣ್ಣನ್ನು ಬೇರೆ ರಾಜ್ಯಗಳಲ್ಲಿ ಅಕ್ರಮವಾಗಿ ಕಳುಹಿಸಿಕೊಡಲಾಗುತ್ತಿದೆ. ಅದು ನೆರೆಯ ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಈ ಮಣ್ಣಿಗೆ ಎಲ್ಲಿಲ್ಲದ ಬೇಡಿಕೆ ಇದ್ದು, ಕೋಟ್ಯಾಂತರ ರೂಪಾಯಿಗೆ ಮಣ್ಣು ಮಾಫಿಯಾದವರು ಜಿಲ್ಲೆಯ ಕೆರೆ ಮಣ್ಣನ್ನು ಅಕ್ರಮವಾಗಿ ಸಾಗಾಣಿಕೆ ಮಾಡುವ ಮೂಲಕ ಮಾರಾಟ ಮಾಡುತ್ತಿದ್ದಾರೆ.ಇನ್ನು ಮಣ್ಣು ಮಾಫಿಯಾದವರು ಹಗಲು ರಾತ್ರಿ ಎನ್ನದೆ ಜೆಸಿಬಿಗಳ ಮೂಲಕ ಕೆರೆಯನ್ನು ಬಗೆಯುತ್ತಿದ್ದು ಕೆರೆಗಳು ತಮ್ಮ ಸ್ವರೂಪವನ್ನೇ ಕಳೆದುಕೊಳ್ಳುತ್ತಿವೆ. ಕೆರೆಗಳಲ್ಲಿ ನೀರು ಬಂದರೂ ನೀರು ಬಾರದೆ ಇದ್ದರೂ ಕೂಡಾ ಪ್ರಾಣಿ ಪಕ್ಷಿಗಳು ಆಹಾರ ನೀರು ಹರಸಿ ಬಂದಾಗ ಕೆರೆಯ ಈ ಭಯಾನಕ ಗುಂಡಿಗಳಲ್ಲಿ ಬಿದ್ದು ಸಾಯುವ ಸ್ಥಿತಿ ನಿರ್ಮಾಣವಾಗುತ್ತಿದೆ.
  ಇನ್ನು ಈ ವರ್ಷ ಸುರಿದ ಅಷ್ಟೋ ಇಷ್ಟೋ ಮಳೆಯಿಂದ ಹಾಗೂ ಕೆಸಿ ವ್ಯಾಲಿ ನೀರು ಹರಿಯುತ್ತಿರುವ ಹಿನ್ನೆಲೆ ಕೆರೆಗಳಲ್ಲಿ ಅಲ್ಪ ಸ್ವಲ್ಪ ನೀರಿದೆ, ದನ ಕರುಗಳು ಪ್ರಾಣಿ ಪಕ್ಷಿಗಳು ಕುಡಿಯಲು ಇರುವ ನೀರನ್ನು ಉಳಿಸದ, ಮಣ್ಣು ಮಾಫಿಯಾದವರು ಕೆರೆಗಳನ್ನು ಬಗೆಯುತ್ತಿದ್ದು ಕೆರೆಗಳಲ್ಲಿ ನೀರು ಹಾಳಾಗುತ್ತಿದೆ. ಇನ್ನು ಕೆರೆಗಳಲ್ಲಿ ಪ್ರಪಾತದ ರೀತಿಯಲ್ಲಿ ಹಳ್ಳಗಳನ್ನು ತೆಗೆದಿರುವ ಹಿನ್ನೆಲೆ ನೀರು ಕುಡಿಯಲು, ಮೇಯಲು ಹೋದ ಪ್ರಾಣಿಗಳು ಗುಂಡಿಯಲ್ಲಿ ಬಿದ್ದು ಸಾವನ್ನಪ್ಪುತ್ತಿವೆ. ಜೊತೆಗೆ ಸಾವಿರಾರು ವರ್ಷಗಳಿಂದ ಉಳಿಸಿಕೊಂಡು ಬಂದ ಕೆರೆಗಳ ಸ್ವರೂಪವೇ ಹಾಳಾಗುತ್ತಿದೆ ಸ್ಥಳೀಯ ಗ್ರಾಮಸ್ಥರ ಆರೋಪಿಸಿದ್ದಾರೆ. ಮೊದಲೆಲ್ಲಾ ಸ್ಥಳೀಯವಾಗಿ ಇಟ್ಟಿಗೆ ಕಾರ್ಖಾನೆಯವರು, ಇಲ್ಲ ರೈತರು ತಮ್ಮ ಹೊಲಗಳಿಗೆ ಮಣ್ಣು ಹೊಡೆಯುತ್ತಿದ್ರು, ಆದ್ರೆ ಈಗಂತೂ ಈ ಮಣ್ಣಿಗೂ ಬೆಲೆ ಬಂದಿರುವ ಕಾರಣ ಮಣ್ಣನ್ನು ಲೂಟಿ ಮಾಡುವುದೇ ಮಾಲೂರು ತಾಲ್ಲೂಕಿನಲ್ಲಿ ದೊಡ್ಡ ದಂಧೆಯಾಗಿ ಮಾರ್ಪಾಟಾಗಿದೆ. ಇನ್ನು ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳಿಂದ ಹಿಡಿದು, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಯಾರಿಗೆ ದೂರು ನೀಡಿದರು, ಯಾರು ಈಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಕಾರಣ ಎಲ್ಲರೂ ಮಾಫಿಯಾದವರ ಮುಲಾಜಿಗೆ ಒಳಗಾಗಿದ್ದಾರೆ ಅನ್ನೋದು ಕೇಳಿ ಬಂದಿದೆ.
  ಒಟ್ಟಾರೆ ಚಿನ್ನದ ನಾಡಲ್ಲಿ ಮರಳು ಮಾಫಿಯಾ ಕಡಿಮೆಯಾಗಿ ಈಗ ಮಣ್ಣು ಮಾಫಿಯಾ ಜೋರಾಗಿ ನಡೆಯುತ್ತಿದೆ, ಈ ಮೂಲಕ ಜಿಲ್ಲೆಯ ಪ್ರಕೃತಿ ಸಂಪತ್ತು, ಜೀವ ವೈವಿದ್ಯ ಹಾಳಾಗುವ ಮುನ್ನ ಜಿಲ್ಲೆಯ ಅಧಿಕಾರಿಗಳು ಮಣ್ಣು ಲೂಟಿ ಕೋರರಿಗೆ ಕಡಿವಾಣ ಹಾಕಬೇಕು ಅನ್ನೋದು ಜಿಲ್ಲೆಯ ಜನರ ಆಗ್ರಹಿಸಿದ್ದಾರೆ.

ಕೆರೆಯಲ್ಲಿ ಮಣ್ಣನ್ನ ಸುಮಾರು ೫೦ ರಿಂದ ೬೦ ಅಡಿಗಳ ಆಳಕ್ಕೆ ತೆಗೆದಿದ್ದಾರೆ. ಇದರಿಂದ ಜಾನುವಾರುಗಳು ಆ ಕಂದಕಕ್ಕೆ ಬಿದ್ದು ಸಾವನ್ನಪ್ಪುತ್ತಿವೆ. ಜೊತೆಗೆ ಜಾನುವಾರುಗಳ ಆಹಾರಕ್ಕೂ ಈ ಕೆರೆಗಳೇ ಜೀವಾಳವಾಗಿವೆ. ಆದರೆ ಮಣ್ಣು ಮಾಫಿಯಾದವರು ಕೆರೆಗಳನ್ನ ಅತಿ ಹಾಳಕ್ಕೆ ಬಗೆದಿರುವುರಿಂದ ಸ್ಥಳೀಯ ರೈತರು,ಜಾನುವಾರು ಮೇಯಿಸುವವರು ಕೆರೆಗಳತ್ತ ಮುಖ ಮಾಡಲು ಭಯಭೀತರಾಗಿದ್ದಾರೆ.

 • ಮುನಿಯಪ್ಪ: ಸ್ಥಳೀಯ

 • ರೈತ ಮುಖಂಡ- ನದಿನಾಲೆಗಳಿಲ್ಲ ಜಿಲ್ಲೆ ಅಂದರೆ ಅದು ಕೋಲಾರ, ಈಜಿಲ್ಲೆಗೆ ಇಲ್ಲಿರುವ ಕೆರೆಗಳೇ ಜೀವನಾಧಾರವಾಗಿದೆ. ಆದರೆ ಹಣದ ದಾಹಕ್ಕಾಗಿ ಕೆಲ ಮಾಫಿಯಾದವರು ಕೆರೆಗಳ ಮೂಲವನ್ನೇ ಹಾಳು ಮಾಡುತ್ತಿದ್ದಾರೆ. ಜೊತೆಗೆ ಇಲ್ಲಿನ ಮಣ್ಣನ್ನ ಅಧಿಕಾರಿಗಳ ಶಾಮೀಲಿನೊಂದಿಗೆ ಹೊರರಾಜ್ಯಗಳಿಗೆ ಕಳಿಸುತ್ತಿದ್ದು, ಕೂಡಲೇ ಜಿಲ್ಲಾಡಳಿತ ಕ್ರಮವಹಿಸಬೇಕೆಂದು ಒತ್ತಾಯಿಸಿದ್ದಾರೆ.
 • ಅಬ್ಬಣಿ ಶಿವಪ್ಪ