ಕೋಲಾರದಲ್ಲಿ ಅಕಾಲಿಕ ಮಳೆ….ಗಾಳಿಯ ಆರ್ಭಟಕ್ಕೆ … ಸಾರ್ವಜನಿಕರ ಜನಜೀವನ ಅಸ್ತವ್ಯಸ್ತ

ಕೋಲಾರ,ಮಾ,೧೭- ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ಅರ್ಧ ತಾಸು ಜೋರು ಮಳೆಯಾಯಿತು.ಮಧ್ಯಾಹ್ನದಿಂದಲೇ ಮೋಡಿ ಕವಿದ ವಾತಾವರಣವಿತ್ತು. ಸಂಜೆ ವೇಳೆಗೆ ಜೋರು ಗಾಳಿ ಬೀಸಲಾರಂಭಿಸಿತು. ಗಾಳಿಯ ಆರ್ಭಟಕ್ಕೆ ರಸ್ತೆಗಳ ಧೂಳು ಇಡೀ ವಾತಾವರಣವನ್ನು ಆವರಿಸಿ ಕೊಂಡಿತು. ಕೆಲ ನಿಮಿಷಗಳಲ್ಲಿ ಧಾರಾಕಾರ ಮಳೆಯಾಯಿತು. ನಗರ ಸೇರಿದಂತೆ ತಾಲ್ಲೂಕಿನ ವಕ್ಕಲೇರಿ ಹೋಬಳಿಯಲ್ಲಿ ಆಲಿಕಲ್ಲು ಸಮೇತ ಮಳೆ ಸುರಿಯಿತು.
ಸುತ್ತ ಕಸ ಹಾಗೂ ಚರಂಡಿಗಳಲ್ಲಿ ಕಟ್ಟಿಕೊಂಡಿದ್ದರಿಂದ ರಸ್ತೆಯಲ್ಲಿ ನೀರು ಉಕ್ಕು ಹರಿಯಿತು. ಜೊತೆಗೆ ಕಸವೂ ಹರಿದು ಬಂದಿದ್ದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ತ್ಯಾಜ್ಯ ಮಯವಾಯಿತು. ವ್ಯಾಪಾರಿಗಳು ಹಾಕಿಕೊಂಡಿದ್ದ ತಾತ್ಕಾಲಿಕ ಟೆಂಟ್‌ಗಳು, ಟಾರ್ಪಲ್‌ಗಳು ಮಳೆ ಗಾಳಿಯಿಂದಾಗಿ ಕಿತ್ತು ಬಂದವು. ಬಿಸಿಲ ಧಗೆ ಹಾಗೂ ರಸ್ತೆ ದೂಳಿನಿಂದ ಬಸವಳಿದಿದ್ದ ಜನರಲ್ಲಿ ತುಸು ನೆಮ್ಮದಿ ಮೂಡಿತು. ಹಲವರು ಮಳೆಯಲ್ಲಿಯೇ ಆಲಿಕಲ್ಲು ಎತ್ತಿಕೊಳ್ಳಲು ರಸ್ತೆಗೆ ಬಂದರು.
ಬಿರುಸಿನ ಮಳೆಯಿಂದ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಅಪಾರ ನಷ್ಟವಾಗಿದ್ದು, ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಲಕ್ಷಾಂತರ ಮೊತ್ತದ ದಿನಸಿ ಪದಾರ್ಥಗಳು ನೀರು ಪಾಲಾಗಿವೆ.
ಗ್ರಾಮಾಂತರ ಪ್ರದೇಶದಲ್ಲಿ ಮಾವು, ಟೊಮೆಟೊ, ಹುಣಸೆ ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿವೆ. ನಗರದ ಕಾರಂಜಿಕಟ್ಟೆಯ ೧೦ನೇ ಕ್ರಾಸ್ ಬಳಿ ಸುಬ್ರಹ್ಮಣ್ಯರಿಗೆ ಸೇರಿದ ಮನೆಯ ಸಜ್ಜೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಲಕ್ಷಾಂತರ ರೂಪಾಯಿ ಮೌಲ್ಯದ ಆಹಾರ ಧಾನ್ಯ ಅಧಿಕಾರಿಗಳ ನಿರ್ಲಕ್ಯಕ್ಷಕ್ಕೆ ನೀರು ಪಾಲಾಗಿದೆ. ಲಕ್ಷಾಂತರ ಮೌಲ್ಯದ ಅಕ್ಕಿ, ಬೇಳೆ, ಬೆಲ್ಲ ಎಲ್ಲವೂ ನೀರು ಪಾಲಾಗಿದೆ. ಕೋಲಾರ ತಾಲ್ಲೂಕು ಬ್ಯಾಲಹಳ್ಳಿ ಗ್ರಾಮದಲ್ಲಿ ಕಳೆದ ಮಾ.೯ ರಂದು ಅಕ್ರಮ ದಾಸ್ತಾನು ಹಾಗೂ ಚುನಾವಣೆ ಹಿನ್ನೆಲೆ ದಾಳಿ ಮಾಡಿ ವಶಕ್ಕೆ ಪಡೆದಿದ್ದ ಆಹಾರ ಇಲಾಖೆ ಅಧಿಕಾರಿಗಳು ಅದನ್ನ ಬೇರೆಡೆ ತೆಗೆದುಕೊಂಡು ಹೋಗಿರಲಿಲ್ಲ, ಗೋಡೌನ್‌ನಲ್ಲೇ ಆಹಾರ ಧಾನ್ಯಗಳು ಇದ್ದ ಹಿನ್ನಲೆಯಲ್ಲಿ ಗುರುವಾರ ಸುರಿದ ಮಳೆಯಲ್ಲಿ ಆಹಾರ ಧಾನ್ಯಗಳ ನೆನೆಯುವಂತಾಯಿತು.
ಶ್ರೀನಿವಾಸಪುರ ತಾಲೂಕಿನ ಬೀರಗನಹಳ್ಳಿಯಲ್ಲಿ ಆಲಿಕಲ್ಲು ಮಳೆ ಬಿದ್ದ ಹಿನ್ನಲೆಯಲ್ಲಿ ಮಾವಿನ ಮರದಲ್ಲಿರುವ ಹೂವಿನ ಮೇಲೆ ಆಲಿಕಲ್ಲು ಬಿದ್ದು ಹಾನಿಯಾಗಿದೆ.ನಗರದ ಪಿಸಿ ಬಡಾವಣೆಯ ಪ್ರಧಾನ ಅಂಚೆ ಕಚೇರಿ ಸಮೀಪ ತೆಂಗಿನ ಮರ ನೆಲಕ್ಕುರಳಿ ೪ ವಿದ್ಯುತ್ ಕಂಬಗಳು ಜಖಂ ಆಗಿದ್ದು, ಕೂಡಲೇ ನಗರಸಭೆ ಸದಸ್ಯ ರಾಕೇಶ್ ಸ್ಥಳಕ್ಕಾಗಮಿಸಿ ನೆಲಕ್ಕುರಳಿದ ತೆರವುಗೊಳಿಸುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಟ್ಟರು.