ಕೋಲಾರಕ್ಕೆ ಸಿದ್ದು ಭೇಟಿ ಮುಂದೂಡಿಕೆ ಸಾಧ್ಯತೆ

ಕೋಲಾರ, ಜ. ೯- ಕಾಂಗ್ರೆಸ್ ಶಾಸಕಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಜನವರಿ ೯ ನೇ ತಾರೀಕು ಕೋಲಾರದ ಭೇಟಿವಿಚಾರದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ನಡೆದ ಎಲ್ಲಾ ವಿದ್ಯಮಾನಗಳು ಸಾರ್ವಜನಿಕರ ಗಮನಕ್ಕೆ ಈಗಾಗಲೇ ಸಾಕಷ್ಟು ಬಂದಿದೆ.
ಸಿದ್ದರಾಮಯ್ಯನವರ ಕೋರಿಕೆ ಮೇರೆಗೆ ಎ.ಐ.ಸಿ.ಸಿ.ವರ್ಕಿಂಗ್ ಕಮಿಟಿ ಹಿರಿಯ ಸದಸ್ಯರಾದ ಕೆಎಚ್ ಮುನಿಯಪ್ಪನವರು ತನ್ನ ಹಿತೈಷಿಗಳೊಂದಿಗೆ ಅವರನ್ನು ಭೇಟಿಯಾದರು. ಕೋಲಾರ ವಿಧಾನಸಭಾ ಕ್ಷೇತ್ರದ ಪ್ರಸ್ತುತ ರಾಜಕೀಯ ವಸ್ತು ಸ್ಥಿತಿಯನ್ನು ವಿವರವಾಗಿ ಸಿದ್ದರಾಮಯ್ಯನವರ ಗಮನಕ್ಕೆ ತಂದು ತಾವು ನಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸುವುದಾದರೆ ನಮ್ಮೆಲ್ಲರಿಗೂ ಯಾವುದೇ ಆಕ್ಷೇಪಣೆ ಇರುವುದಿಲ್ಲ ಎಂದಿದ್ದಾರೆ.
ಅದರೆ ನಮ್ಮ ಜಿಲ್ಲಾ ಕಾಂಗ್ರೇಸ್ ಪಕ್ಷದಲ್ಲಿನ ಎಲ್ಲಾ ಗೊಂದಲಗಳನ್ನು ನಿವಾರಣೆ ಮಾಡುವುದು ಅನಿವಾರ್ಯವಾಗಿರುವುದರಿಂದ ನಮ್ಮ ಬೆಂಬಲಿಗರ ಮತ್ತು ಘಟಬಂಧನ್ ನಾಯಕರುಗಳ ಜೂತೆ ಮುಖಾಮುಖಿ ಸಭೆ ಮಾಡಿ ನಮ್ಮ ಮಧ್ಯೆ ಇರುವಂತ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ ಬಂದರೆ ಮಾತ್ರ ಪಕ್ಷಕ್ಕೆ ಹಾಗೂ ನಿಮಗೆ ಒಳ್ಳೆಯದಾಗುತ್ತೆ ಇಲ್ಲದಿದ್ದಲ್ಲಿ ನಿಮ್ಮನ್ನ ಹರಕೆ ಕುರಿ ಮಾಡುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಮುಂದುವರೆದ ನೀವು ಈ ದಿಕ್ಕಿನಲ್ಲಿ ಕಾರ್ಯಪ್ರವೃತ್ತರಾಗಿ ಒಂದೆರಡು ದಿನದಲ್ಲಿ ಇದನ್ನು ಬಗೆಹರಿಸಿ ೯ನೇ ತಾರೀಕು ಕೋಲಾರಕ್ಕೆ ಬಂದರೆ ಸ್ವಾಗತ ಇಲ್ಲದಿದ್ದಲ್ಲಿ ನಾವು ನಿಮ್ಮ ಜೊತೆ ವೇದಿಕೆ ಹಂಚಿ ಕೊಳ್ಳಲಿಕ್ಕೆ ನಮಗೆ ಸಾಧ್ಯ ಆಗುವುದಿಲ್ಲ. ಕಾರಣ ನನಗೆ ಕಳೆದ ಚುನಾವಣೆಯಲ್ಲಿ ೫ ಲಕ್ಷ ಮತ ಕೊಡಿಸಿದ ಪಕ್ಷದ ನಾಯಕರುಗಳ ಸ್ವಾಭಿಮಾನವನ್ನು ಬೀದಿಯಲ್ಲಿ ಹರಾಜು ಮಾಡಿ ಬಿಜೆಪಿಗೆ ಮತ ಹಾಕಿಸಿದವರ ಜೊತೆಗೆ ವೇದಿಕೆ ಹಂಚಿಕೊಳ್ಳುವಷ್ಟು ಆತ್ಮ ವಂಚಕ ನಾನು ಅಲ್ಲ ಅಂತ ಸ್ಪಷ್ಟಪಡಿಸಿದರು.
ಇಷ್ಟೆಲ್ಲಾ ನಡೆಯುತ್ತಿದ್ದರು ಘಟಬಂಧನ್ ನಾಯಕರಗಳು ಎಂದು ಹೇಳಿಕೊಳ್ಳುವ ಕೆಲವೊಬ್ಬರು ಕೋಲಾರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳನ್ನು ಹಾಗೂ ಜಿಲ್ಲಾ ಸಮಿತಿಯ ಪದಾಧಿಕಾರಿಗಳನ್ನು ಲೆಕ್ಕಿಸದೆ ಅವರ ಪಾಡಿಗೆ ಅವರು ಸಿದ್ದರಾಮಯ್ಯನವರ ಭೇಟಿ ಹಾಗೂ ಚುನಾವಣಾ ಸ್ಪರ್ಧೆಯ ಪ್ರಚಾರವನ್ನು ಒಂದು ಬಣ್ಣದ ಪರವಾಗಿ ಮಾಡುತ್ತಾ ಹೊರಟಿರುವುದು ಎಷ್ಟು ಮಾತ್ರ ಸರಿ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
ಸಿದ್ದರಾಮಯ್ಯನವರು ಪ್ರತಿಕ್ರಿಯಿಸಿ ಇದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಾನು ಯಾರಿಗೂ ಇದನ್ನ ಮಾಡಿ ಅಂತ ಹೇಳಿಯೂ ಇಲ್ಲ ಎಂದು ಸ್ಪಷ್ಟಪಡಿಸಿರುತ್ತಾರೆ.
ಮುಂದೆ ಕೋಲಾರದಲ್ಲಿ ನಾವು ಭೇಟಿ ಆಗುವಾಗ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್, ರಾಜ್ಯದ ಕಾಂಗ್ರೆಸ್ ಎಎಸಿಸಿ ಉಸ್ತುವಾರಿ ಸುರ್ಜಿತ್‌ವಾಲ, ಕಳೆದ ೨೦೧೯ರ ಸಂಸತ್ ಚುನಾವಣಾ ಸಮಯದಲ್ಲಿ ರಾಜ್ಯದ ಉಸ್ತುವಾರಿಯಾಗಿದ್ದ ವೇಣುಗೋಪಾಲ್ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಅವರು ಹಾಜರಿರಲೇ ಇರಲೇಬೇಕು ಎಂಬುದನ್ನ ಖಡಕ್ಕಾಗಿ ಸ್ಪಷ್ಟಪಡಿಸಿದ್ದರು.
ಇದರ ಮುಂದುವರೆದ ಭಾಗವಾಗಿ ಸಿದ್ದರಾಮಯ್ಯನವರು ರಮೇಶ್ ಕುಮಾರ್ ಅವರೊಂದಿಗೆ ಮಾತನಾಡಿ ನೀವುಗಳು ಕೆಎಚ್ ಮುನಿಯಪ್ಪನವರೊಂದಿಗೆ ಮುಖಾಮುಖಿ ಕೂತು ಮಾತಾಡದ ಹೊರೆತು ಇದಕ್ಕೆ ಬೇರೆ ದಾರಿ ಇಲ್ಲ ಅಂತ ಸ್ಪಷ್ಟಪಡಿಸಿ ಶನಿವಾರ ಸಾಯಂಕಾಲ ಭೇಟಿ ಆಗಲೇಬೇಕು ಎಂಬ ಕಟ್ಟಪ್ಪಣೆ ಹೊರಡಿಸಿದ್ದರು.
ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷರು, ರಾಜ್ಯ ಉಸ್ತುವಾರಿ ಸುರ್ಜೇತ್‌ವಾಲಾ ಅವರು ಹಾಗೂ ವೇಣುಗೋಪಾಲ್ ಅವರು ಸದ್ಯ ಬೆಂಗಳೂರಲ್ಲಿ ಲಭ್ಯ ಇಲ್ಲದಿರುವುದರಿಂದ ಮತ್ತು ಕೆಎಚ್‌ಎಂ ಅವರು ಭಾನುವಾರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಆಯ್ಕತಾ ಸಮಾವೇಶ ತಯಾರಿಗಳಿಗಾಗಿ ಚಿತ್ರದುರ್ಗಕ್ಕೆ ಪ್ರಯಾಣ ಬೆಳೆಸಬೇಕಾಗಿದ್ದರಿಂದ ಸಿದ್ದರಾಮಯ್ಯ ಅವರಿಗೆ ಇವತ್ತಿನ ಸಭೆ ಮುಂದೂಡಿ ಸಾಧ್ಯವಾದರೆ ಭಾನುವಾರ ಸಮಾವೇಶದ ನಂತರ ಭೇಟಿ ಮಾಡಬಹುದು ಇಲ್ಲದಿದ್ದರೆ ಒಂಬತ್ತನೇ ತಾರೀಖಿನ ಸಿದ್ದರಾಮಯ್ಯ ಅವರ ಕೋಲಾರ ಭೇಟಿಯನ್ನ ಅನಿವಾರ್ಯವಾಗಿ ಮುಂದೂಡಬೇಕಾಗುತ್ತದೆ ಎಂದು ಶನಿವಾರ ಮಧ್ಯಾಹ್ನ ಸಿದ್ದರಾಮಯ್ಯ ಅವರು ಕೆಎಚ್‌ಎಂ ಅವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿದಾಗ ಸ್ಪಷ್ಟಪಡಿಸಿದ್ದಾರೆ.
ಮುಂದಿನ ತೀರ್ಮಾನ ಪಕ್ಷದ ಐಕ್ಯತೆ ಹಾಗೂ ಶಿಷ್ಟಾಚಾರವನ್ನು ಗಮನದಲ್ಲಿಟ್ಟುಕೊಂಡು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರು ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ