ಕೋಲಾರಕ್ಕೆ ಶೀಘ್ರ ಪಾಲಿಕೆ ಭಾಗ್ಯ: ಕಾರ್ಪೋರೇಟ್ ಕಟ್ಟಡದ ಸುಯೋಗ

ಕೋಲಾರ,ಮಾ,೩೧- ಕೋಲಾರ ನಗರಸಭೆ ಶೀಘ್ರದಲ್ಲೇ ಮಹಾನಗರ ಪಾಲಿಕೆ ಆಗಲಿದ್ದು ಹೀಗಾಗಿ ಪಾಲಿಕೆ ಮಟ್ಟಕ್ಕೆ ಅಗತ್ಯವಾದ ಕಾಪೋರೇಟ್ ಆಫೀಸ್ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ನಗರಸಭೆ ಅಧ್ಯಕ್ಷೆ ಶ್ವೇತಾ ಆರ್. ಶಬರೀಶ್ ಹೇಳಿದರು.
ನಗರದ ತಾಲೂಕು ಕಚೇರಿ ಪಕ್ಕದಲ್ಲಿ ನಗರಸಭೆ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಪ್ಲಾನ್, ಡಿಪಿಆರ್, ಕೂಡಾ ಅಪ್ರೂವಲ್, ಟೆಂಡರ್‌ನ್ನು ವೇಗವಾಗಿ ಮಾಡಿಸುವ ಮೂಲಕ ಚುನಾವಣಾ ನೀತಿಸಂಹಿತೆಗೆ ಮೊದಲೇ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ ಎಂದರು.
ಡಿಸಿ ವೆಂಕಟರಾಜಾ ಅವರು ವಿಶೇಷ ಆಸಕ್ತಿ ವಹಿಸಿ ಯೋಜನೆ ತ್ವರಿತಗತಿಯಲ್ಲಿ ಆಗಲು ಸಹಕಾರ ನೀಡಿದ್ದಾರೆ. ಅಂತೆಯೇ ಪಿಡಿ ಖಲೀಲ್, ಕೂಡಾ ಅಧ್ಯಕ್ಷ ವಿಜಯಕುಮಾರ್ ಅವರು ಈ ನಿಟ್ಟಿನಲ್ಲಿ ನಿರೀಕ್ಷೆಗೂ ಮೀರಿದ ಸಹಕಾರ ನೀಡುವ ಮೂಲಕ ನಗರಕ್ಕೆ ಕೊಡುಗೆ ನೀಡಿದ್ದು ಜಿಲ್ಲೆಯ ಸಂಸದರು, ಶಾಸಕರುಗಳು, ವಿಧಾನಪರಿಷತ್ ಸದಸ್ಯರುಗಳು ಮತ್ತು ನಗರಸಭೆ ಸದಸ್ಯರು ಪಕ್ಷಾತೀತ ಸಹಕಾರ ನೀಡಿದ್ದಾರೆಂದು ಸ್ಮರಿಸಿದರಲ್ಲದೆ ಹಲವಾರು ಜಿಲ್ಲೆಗಳಲ್ಲಿ ಮುಖ್ಯ ರಸ್ತೆಯಲ್ಲಿ ಇರುವಂತೆ ನಮ್ಮಲ್ಲೂ ನಗರಸಭೆ ಕಟ್ಟಡ ನಿರ್ಮಾಣ ಆಗುತ್ತಿರುವುದು ತೃಪ್ತಿ ತಂದಿದೆ ಎಂದು ನುಡಿದರು.
ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಹಣದ ಕೊರತೆ ಎದುರಿಸುತ್ತಿದ್ದು ಆದರೂ ೮.೫ ಕೋಟಿ ರೂ. ವೆಚ್ಚದಲ್ಲಿ ನಗರಸಭೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಡಿಪಿಆರ್- ಎಸ್ಟಿಮೇಟ್ ಅಪ್ರೂವಲ್, ಫೈನಾನ್ಷಿಯಲ್ ಬಿಡ್ ಅಪ್ರೂವಲ್, ಟೆಂಡರ್ ಕರೆಯಲು ಹತ್ತು ಹಲವಾರು ಬಾರಿ ಪತಿ ಶಬರೀಶ್ ಜತೆಗೆ ಬೆಂಗಳೂರು ಡಿಎಂಇ ಕಚೇರಿಗೆ ಸುತ್ತಿ ಯೋಜನೆಯನ್ನು ತಂದಿದ್ದೇನೆ. ಯಾದವ ಜನಾಂಗದ ಮೊದಲ ಅಧ್ಯಕ್ಷೆಯಾಗಿ ಎರಡೂವರೆ ವರ್ಷದಿಂದ ಇದ್ದಬದ್ದ ನಿಧಿಯನ್ನೇ ಒಗ್ಗೂಡಿಸಿಕೊಂಡು ಸ್ವಚ್ಛ ಕೋಲಾರ ಮಾಡಿ ಸೌಂದರ್ಯಗೊಳಿಸಲು ಶ್ರಮಿಸುತ್ತಿದ್ದು ೧೦ ಕೋಟಿ ರೂ. ವೆಚ್ಚದಲ್ಲಿ ನಗರದ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತಿರುವುದು ಸಂತೋಷ ತಂದಿದೆ. ಆದರೆ ಕೆಲ ಟೀಕಾಕಾರರು ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಫೋಟೋ ಹಾಕಿ ಆರೋಪ ಮಾಡುತ್ತಿರುವುದು ನನ್ನ ಮನಸಿಗೆ ನೋವು ತಂದಿದ್ದು ಸೌಹಾರ್ಧತೆಗಾಗಿ ಆಪ್ತರ ಮಾನನಷ್ಟದ ಸಲಹೆಯನ್ನೂ ಕೈ ಬಿಟ್ಟಿದ್ದೇನೆ ಎಂದು ಪ್ರತಿಕ್ರಿಯಿಸಿದರು.
ನಗರಸಭೆ ಸದಸ್ಯ ಮುಬಾರಕ್ ಮಾತನಾಡಿ, ಸ್ಥಳೀಯ ಸಂಸ್ಥೆಗಳು ಸಂಪನ್ಮೂಲದ ಕೊರತೆ ಎದುರಿಸುತ್ತಿದ್ದು ಹೀಗಾಗಿ ಸರ್ಕಾರ ನಿಧಿ ಬಿಡುಗಡೆ ಮಾಡಿರುವುದು ಸ್ವಾಗತಾರ್ಹ. ಹೆಣ್ಣು ಮಕ್ಕಳಲ್ಲಿನ ಕೌಶಲ್ಯವನ್ನು ಶ್ವೇತಾಶಬರೀಶ್ ಸಾಬೀತುಮಾಡಿದ್ದು ಮಹಿಳಾ ಮೀಸಲಾತಿಯನ್ನು ಸಾರ್ಥಕಗೊಳಿಸಿದ್ದಾರೆಂದು ಶ್ಲಾಘಿಸಿ ಒಂದೇ ವರ್ಷದಲ್ಲಿ ಕಟ್ಟಡ ಪರಿಪೂರ್ಣವಾಗಿ ನಿರ್ಮಾಣಗೊಳ್ಳಲೆಂದು ಆಶಿಸಿದರು.
ಹಿರಿಯ ಸದಸ್ಯೆ ನಾಜಿಯಾಬಾಬಾಜಾನ್ ಮಾತನಾಡಿ, ಸರ್ಕಾರಕ್ಕೆ ವಾಪಸ್ ಹೋದ ಅನುದಾನ ಮತ್ತೆ ತಂದು ಕಾಮಗಾರಿ ಅನುಷ್ಟಾನ ಮಾಡಿದ ಶ್ವೇತಾಶಬರೀಶ್ ಸಾಧನೆ ಶ್ಲಾಘನೀಯ ಎಂದು ಕೊಂಡಾಡಿದರು.
ಅಧಿಕಾರ ಸ್ವೀಕರಿಸಿದ ದಿನವೇ ಹೊಸ ಕಟ್ಟಡ ನಿರ್ಮಾಣಕ್ಕೆ ತೊಟ್ಟ ಸಂಕಲ್ಪ ಇಂದು ಸಾಕಾರವಾಗಿದ್ದು ಈ ದೆಸೆಯಲ್ಲಿ ಪತಿ ಶಬರೀಶ್, ಮಾವ ಮೇಸ್ತ್ರಿ ನಾರಾಯಣಸ್ವಾಮಿ, ಭಾವ ರಮೇಶ್ ಸೇರಿದಂತೆ ಇಡೀ ಕುಟುಂಬದ ಸಹಕಾರ ಇದೆ ಎಂದು ನಗರಸಭೆ ಅಧ್ಯಕ್ಷೆ ಶ್ವೇತಾಶಬರೀಶ್ ಹೇಳಿದರು.