ಕೋಲಾರಕ್ಕೆ ಎಂಟಿಬಿ ಉಸ್ತುವಾರಿ ಸಚಿವ

ಕೋಲಾರ,ಮೇ.೩: ಊರು ಕೊಳ್ಳೆ ಹೊಡದ ಮೇಲೆ ಕೋಟೆ ಬಾಗಿಲು ಹಾಕಿದರು ಎಂಬ ಗಾದೆಯಂತೆ ಕೊನೆಗೂ ಕೋಲಾರ ಜಿಲ್ಲೆಗೆ ಎಂಟಿಬಿ ನಾಗರಾಜ್ ಅವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ್ದು, ಕೊರೊನಾ ಸಂಕಷ್ಟಕ್ಕೆ ಒಳಗಾಗಿರುವವರು ಮತ್ತು ರೈತರ ಸಂಕಷ್ಟಕ್ಕೆ ಕೂಡಲೇ ಧಾವಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಜನರು ನರಳಾಡುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್‌ಗಳಿಗೆ ೧೦ ಸಾವಿರ ಹಣ ನೀಡಬೇಕಾಗಿದೆ. ಇನ್ನು ಜಿಲ್ಲಾಸ್ಪತ್ರೆಯಲ್ಲಿ ೪೩ ವೆಂಟಿಲೇಟರ್ ಇದೆ ಎಂದು ಹೇಳಲಾಗುತ್ತಿದೆ.
ಅವುಗಳನ್ನು ನಿರ್ವಹಿಸಲು ಸಿಬ್ಬಂದಿ ನೀಡಿದ್ದರೆ ಸಾಕಷ್ಟು ಮಂದಿಯ ಪ್ರಾಣವನ್ನಾದರೂ ಉಳಿಸಬಹುದಾಗಿತ್ತು. ಡಿಸಿಎಂ, ಆರೋಗ್ಯ ಸಚಿವರು ಬಂದು ಹೋದರೂ ಆಸ್ಪತ್ರೆಗಳಲ್ಲಿ ಇನ್ನೂ ಸುಧಾರಣೆ ಕಂಡುಬರುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಅಲ್ಲದೆ ರೈತರ ಸಾವಿರಾರು ಎಕರೆ ಬೆಳೆಗಳು ನಷ್ಟವಾಗುತ್ತಿದ್ದು, ಕಫ್ರ್ಯೂ ಹಿನ್ನೆಲೆಯಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಸಿಗುತ್ತಿಲ್ಲ. ಬೆಳೆ ನಷ್ಟ ಪರಿಹಾರಗಳನ್ನು ಕಲ್ಪಿಸುವ ಜೊತೆಗೆ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೂ ನೂತನ ಉಸ್ತುವಾರಿ ಸಚಿವರು ಆದ್ಯತೆ ನೀಡಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.
ಕೊರೊನಾ ೨ನೇ ಅಲೆಯಿಂದಾಗಿ ಜನರು ಸಾಕಷ್ಟು ನರಳಾಡುತ್ತಿರುವ ಸಂದರ್ಭದಲ್ಲಿ ಸರಕಾರ ಎಚ್ಚೆತ್ತು ಉಸ್ತುವಾರಿ ಸಚಿವರನ್ನು ನೇಮಿಸಿದೆ. ಸಚಿವರು ಕೇವಲ ಅವರ ಪಕ್ಷಕ್ಕೆ ಸೀಮಿತರಾಗದೆ ಜಿಲ್ಲೆಯ ಪ್ರತಿಯೊಬ್ಬ ಸಾಮಾನ್ಯ ಕಟ್ಟಕಡೆಯ ಪ್ರಜೆಯ ಸಮಸ್ಯೆಗಳಿಗೆ ಸ್ಪಂದಿಸುವಂತಾಗಲಿ ಎಂದು ಮನವಿ ಮಾಡಿದ್ದಾರೆ.